ಸಿಇಟಿ ದಾಖಲೆ ಪರಿಶೀಲನೆ, ಅಭ್ಯರ್ಥಿಗಳು ಕಡ್ಡಾಯವಾಗಿ ಹಾಜರಿರಬೇಕು:ನಾಗಮಣಿ
ಶಿವಮೊಗ್ಗ, ಜೂ. 4: ಸಿಇಟಿ 2017 ರ ಕೌನ್ಸೆಲಿಂಗ್ ದಾಖಲೆ ಪರೀಶೀಲನೆಗೆ ಅಭ್ಯರ್ಥಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಿಇಟಿ ನೋಡಲ್ ಅಧಿಕಾರಿ ನಾಗಮಣಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜೂನ್ 5 ರಿಂದ 21ರವರೆಗೆ ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಕೌನ್ಸಲಿಂಗ್ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.ಸಿಇಟಿ 2017 ದಾಖಲೆ ಪರಿಶೀಲನೆಗೆ ಮೂಲ ದಾಖಲೆಯೊಂದಿಗೆ ಹಾಗೂ ಅದರ ದೃಢೀಕೃತ ದಾಖಲೆ ಪ್ರತಿಗಳೊಂದಿಗೆ ಅಭ್ಯರ್ಥಿ ಕಡ್ಡಾಯವಾಗಿ ಹಾಜರಿರಬೇಕು. ಪೋಷಕರು ಸಹಾಯಕ್ಕೆ ಹಾಜರಿರಬಹುದು ಎಂದು ಹೇಳಿದರು.
ಶಿವಮೊಗ್ಗದ ಜೆಎನ್‌ಎನ್‌ಸಿಇ ಕಾಲೇಜು ಕ್ಯಾಂಪಸ್‌ನಲ್ಲಿರುವ ಗ್ರಂಥಾಲಯದ ಎರಡನೇ ಮಹಡಿಯಲ್ಲಿ ಐದು ಮಳಿಗೆಗಳನ್ನು ದಾಖಲೆ ಪರಿಶೀಲನೆಗೆ ಸಿದ್ಧತೆ ಮಾಡಲಾಗಿದ್ದು, ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುವ ಈ ಪ್ರಕ್ರಿಯೆಯಲ್ಲಿ ಸಿಇಟಿ ಬರೆದಿರುವ ಅಭ್ಯರ್ಥಿಗಳು ತಮ್ಮ ರ್ಯಾಂಕ್ ಅನುಸಾರ ಜೂನ್ 5ರಿಂದ 21ರವರೆಗೆ ನಡೆಯುವ ದಾಖಲೆ ಪರಿಶೀಲನೆಯಲ್ಲಿ ಭಾಗವವಹಿಸಬಹುದು ಎಂದರು.
ರ್ಯಾಂಕ್ ಅನುಸಾರ ಬೆಳಿಗ್ಗೆ 8:30ರಿಂದ ನೋಂದಣಿ ಇರಲಿದ್ದು ನಂತರ ಬೆಳಿಗ್ಗೆ 9ರಿಂದ 11, 11:15ರಿಂದ 1:15 ಹಾಗೂ ಮಧ್ಯಾಹ್ನ 2ರಿಂದ 4 ಮತ್ತು 4:15ರಿಂದ 6:15ರವರೆಗೆ ಪ್ರತಿ ದಿನ ನಡೆಯಲಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿಯಂತೆ ದಾಖಲೆ ಪರಿಶೀಲನೆ ಹಾಜರಾಗಬೇಕು ಎಂದರು.
ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತೊಂದು ಸೆಟ್ ಗೆಜೆಟೆಡ್ ಅಧಿಕಾರಿಯಿಂದ ಜೆರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಅನುಕ್ರಮವಾಗಿ ಜೋಡಿಸಿ ಪರಿಶೀಲನೆಗಾಗಿ ಹಾಜರುಪಡಿಸಬೇಕು ಎಂದು ಅವರು ತಿಳಿಸಿದರು.
ಸಿಇಟಿಗೆ ಅನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಿದ ನಮೂನೆಯ ಅಂತಿಮ ಪ್ರತಿ, ಶುಲ್ಕ ಚಲನ್ ಮೂಲ ಪ್ರತಿ, ಮೂಲ ಪ್ರವೇಶ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ದ್ವಿತೀಯ ಪಿಯು ಅಂಕಪಟ್ಟಿ, ಬಿಇಒ ಅಥವಾ ಡಿಡಿಪಿಐ ಅವರಿಂದ ದೃಢೀಕರಿಸಿದ ವ್ಯಾಸಂಗ ದೃಢೀಕರಣ ಪತ್ರ, ಎರಡು ಇತ್ತೀಚಿನ ಭಾವಚಿತ್ರಗಳು, ಈ ಮುಂದಿನ ದಾಖಲೆಗಳು ಅನ್ವಯವಾಗುವಂತಿದ್ದ ಪಕ್ಷದಲ್ಲಿ ಸೂಪರ್‌ನ್ಯೂಮರರಿ ಕೋಟಾ ಅಡಿ ಬಯಸಿದ್ದಲ್ಲಿ ತಹಸೀಲ್ದಾರ್ ಅವರಿಂದ ಪಡೆದ ಪ್ರಮಾಣ ಪತ್ರ ತರಬೇಕು ಎಂದರು.
ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ವ್ಯಾಸಂಗ ಮೀಸಲಾತಿ ಬಯಸಿದ್ದರೆ ಬಿಇಒ ಅವರಿಂದ ದೃಢೀಕರಿಸಿದ ಪತ್ರ, ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ಜಾತಿ ಪ್ರಮಾಣ ಪತ್ರಗಳು ನಿಗದಿತ ನಮೂನೆಯಲ್ಲಿರಬೇಕು ಹಾಗೂ ಇವರು ಆದಾಯ ಪ್ರಮಾಣ ಪತ್ರ ಹಾಜರುಪಡಿಸಬೇಕು ಹಾಗೂ ಹೈದರಾಬಾರ್ ಕರ್ನಾಟಕ ಮೀಸಲಾತಿ ಬಯಸುವವರೂ ನಿಗದಿತ ನಮೂನೆಯಲ್ಲಿ ಆಯಾ ಉಪ ವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಹಾಜರುಪಡಿಸಬೇಕು ಎಂದು ಅವರು ವಿವರಿಸಿದರು.
ಎನ್‌ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರಕೆರೆ ವಿಶ್ವನಾಥ್, ಕಾರ್ಯದರ್ಶಿ ಎಸ್.ಎಚ್.ನಾಗರಾಜ್, ಉಪಾಧ್ಯಕ್ಷ ಟಿ.ಆರ್. ಅಶ್ವಥ್ ನಾರಾಯಣಶೆಟ್ಟಿ, ಜೆಎನ್‌ಎನ್‌ಸಿಇ ಪ್ರಾಂಶುಪಾಲ ಮಹಾದೇವಸ್ವಾಮಿ, ಸಿಇಟಿ ಹೆಚ್ಚುವರಿ ನೋಡಲ್ ಅಧಿಕಾರಿ ಪ್ರವೀಣ್ ಮಹಿಷಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿ ಛಾಯಾದೇವಿ ಮತ್ತಿತರರು ಉಪಸ್ಥಿತರಿದ್ದರು.







