ಮುಂಗಾರು ಪೂರ್ವ ಮಳೆ: ಕೃಷಿ ಚಟುವಟಿಕೆ ಚುರುಕು
ಚಿಕ್ಕಮಗಳೂರು, ಜೂ.4: ಮಲೆನಾಡು ಮತ್ತು ಬಯಲುಸೀಮೆ ಭಾಗಗಳನ್ನು ಒಳಗೊಂಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ಹದವಾಗಿ ಸುರಿದಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ಈ ಬಾರೀ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಬರುವ ನಿರೀಕ್ಷೆ ಹೊಂದಿರುವ ಜಿಲ್ಲೆಯ ರೈತಾಪಿ ವರ್ಗ ಕೇರಳದಲ್ಲಿ ಮಳೆಯ ಮಾರುತ ಕಳೆಗಟ್ಟುವುದಕ್ಕಾಗಿ ಕಾದಿದ್ದಾರೆ. ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಬೆಳೆಯು ಸಮರ್ಪಕವಾಗಿ ಬಂದಿರಲಿಲ್ಲ. ಹೀಗಾಗಿ ಭತ್ತದ ಗದ್ದೆಗಳು ನೀರಿಲ್ಲದೆ ಹಾಳು ಬಿದ್ದಿದ್ದರೆ ಇನ್ನು ಕೆಲವೆಡೆ ಅಲ್ಪ ನೀರು ಸಾಕಾಗಬಹುದಾದ ಬೆಳೆಗಳು ಬೆಳೆಯಲಾಗುತ್ತಿತ್ತು. ಸದ್ಯ ಮಲೆನಾಡಿನ ಸತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿನಿತ್ಯ ಮಳೆಯ ಮೋಡಗಳು ಆಕಾಶದಲ್ಲಿ ಉದ್ದಗಲಕ್ಕೂ ಓಡಾಡುತ್ತಿವೆ. ಈಗಾಗಲೇ ಮುಂಗಾರು ಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿರುವುದರಿಂದ ಭತ್ತದ ಗದ್ದೆಗಳ ಊಳುಮೆಗೆ ಬೇಕಾದಷ್ಟು ನೀರು ಹರಿದಿದೆ. ಮೊದಲ ಉಳುಮೆಯ ನಂತರ ಮುಂಗಾರು ಮಳೆ ಸರಿಯಾಗಿ ಬಂದರೆ ಈ ಸಲ ಭತ್ತದ ಗದ್ದೆಗಳು ಉತ್ತಮವಾಗಿ ಸಸಿ ನಾಟಿ ಮಾಡಬಹುದಾದಂತೆ ಕಂಗೊಳಿಸಲಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆ ಬರುತ್ತಿದೆ. ಬೆಳಿಗ್ಗೆ ಮದ್ಯಾಹ್ನ, ಸಂಜೆ, ರಾತ್ರಿ ಬಿಟ್ಟು ಬಿಟ್ಟು ಮಳೆ ಸುರಿಯ್ಯುತ್ತಿದೆ. ಆದರೆ ನೀರು ಹರಿದು ಹೋಗುವಂತೆ ಮಳೆಯಾಗಿಲ್ಲ. ಬೆಳೆಗಳಿಗೆ ಬೇಕಾದಂತೆ ಹದವಾದ ಮಳೆ ಸುರಿದಿದೆ. ಈ ಮಧ್ಯೆ ಕಾಫಿ ಬೆಳೆಗಾರರು ತೋಟಗಳಿಗೆ ಗೊಬ್ಬರ ಹಾಗೂ ಸುಣ್ಣ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.ಮಳೆಯ ನಡುವೆ ಬಿಸಿಲು ಬರುತ್ತಿರುವುದರಿಂದ ತೋಟದ ಕೆಲಸಗಳಿಗೆ ಅನುಕೂಲವಾಗಿದೆ.
Next Story





