ಕೋವಿ ಹಕ್ಕು ಉಳಿಸಿಕೊಳ್ಳಲು ಲೇಖಕ ಪಿ.ಎಸ್.ಸುಬ್ಬಯ್ಯ ಸಲಹೆ

ಮಡಿಕೇರಿ ಜೂ. 4 :ಕೊಡಗಿನ ಕೊಡವ ಸಮುದಾಯಕ್ಕೆ ವಂಶಪಾರಂಪರ್ಯವಾಗಿ ದೊರಕಿರುವ ಬಂದೂಕಿನ ಹಕ್ಕನ್ನು ಅತ್ಯಂತ ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕೆಂದು ಹಿರಿಯ ವಕೀಲರಾದ ಪಾಲೆಕಂಡ ಎಸ್. ಸುಬ್ಬಯ್ಯ ಸಲಹೆ ನೀಡಿದ್ದಾರೆ. ಯುನೈಟೆಡ್ ಕೊಡವ ಆರ್ಗನೈಸೇಷನ್ ಮತ್ತು ಮೈಸೂರಿನ ಕೊಡವ ಒಗ್ಗಟ್ಟು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ 'ದಿ ಗ್ಯಾಲೆಂಟ್ ಕೊಡವ ಅಂಡ್ ಹಿಸ್ ಗನ್'ಎನ್ನುವ ತಮ್ಮದೇ ಕೃತಿಯ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡವ ಸಮುದಾಯಕ್ಕೆ ಕೋವಿಯನ್ನು ಹೊಂದಲಿರುವ ಹಕ್ಕು ಮತ್ತು ಜಮ್ಮಾ ಕೋವಿಯ ಹಕ್ಕು ಎನ್ನುವುದು ಸಂಪೂರ್ಣವಾಗಿ ವಿಭಿನ್ನವಾದುದು. ಕೊಡವರು ಕೋವಿಯನ್ನು ಹೊಂದುವ ಹಕ್ಕನ್ನು ವಂಶಪಾರಂಪರ್ಯವಾಗಿ ಪಡೆದುಕೊಂಡಿದ್ದಾರೆ. ಆದರೆ ಜಮ್ಮಾ ಹೊಂದಿರುವವರಿಗೆ ಕೋವಿ ಹೊಂದಿಕೊಳ್ಳಲು ಇರುವ ಹಕ್ಕು ಬಳಿಕ ಸೇರ್ಪಡೆಗೊಂಡಿದೆಯೆಂದು ಸ್ಪಷ್ಟಪಡಿಸಿದರು. ಕೊಡವರು ಕೋವಿ ಹೊಂದಲು ಇರುವ ವಿನಾಯಿತಿ ಮತ್ತು ಅವಕಾಶದಂತೆಯೇ ದೇಶದ ರಾಜ ಮಹಾರಾಜರುಗಳಿಗೂ ವಿವಿಧ ಅಸ್ತ್ರಗಳನ್ನು ಹೊಂದಲು ಮುಕ್ತ ಅವಕಾಶವಿತ್ತು. ಇಂತಹ ಅವಕಾಶವನ್ನು 1971 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತೆಗೆದುಹಾಕಿದ್ದನ್ನು ಉಲ್ಲೇಖಿಸಿದ ಪಾಲೆಕಂಡ ಎಸ್. ಸುಬ್ಬಯ್ಯ, ಈ ಹಿನ್ನೆಲೆಯಲ್ಲಿ ಕೊಡವರು ಹೊಂದಿರುವ ಕೋವಿಯ ಹಕ್ಕಿನ ಸಂರಕ್ಷಣೆಗೆ ಸದಾ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ::: ಕಬ್ಬನ್ ಆದೇಶ ::: ಬ್ರಿಟೀಷ್ ಚೀಫ್ ಕಮಿಷನರ್ ಜನರಲ್ ಮಾರ್ಕ್ ಕಬ್ಬನ್ ತಮ್ಮ ಆದೇಶದಲ್ಲಿ ಕೊಡಗಿನ ಜನತೆಗೆ ಕೋವಿ ಹೊಂದುವ ಅವಕಾಶವನ್ನು ಒದಗಿಸಿದ್ದು, ಇದು ಕೊಡವಸಮುದಾಯಕ್ಕೆ ಸೀಮಿತವಾದ ಒಂದು ಆದೇಶವಾಗಿದೆಯೆಂದು ಪಿ.ಎಸ್. ಸುಬ್ಬಯ್ಯ ಸ್ಪಷ್ಟಪಡಿಸಿದರು. ಈ ರೀತಿ ಕೋವಿ ಹೊಂದುವ ವಿನಾಯಿತಿಯನ್ನು 1963 ರಲ್ಲಿ ಸೇರ್ಪಡೆಗೊಳಿಸಲಾಯಿತು. 1959 ರಲ್ಲಿ ಭಾರತೀಯ ಸಶಸ್ತ್ರ ಕಾಯ್ದೆಯಂತೆ 1962 ರಲ್ಲಿ ಕೊಡವರ ಕೋವಿಯ ಹಕ್ಕಿನ ವಿನಾಯಿತಿಯನ್ನು ತೆಗೆದುಹಾಕಬೇಕೆನ್ನುವ ಪ್ರಯತ್ನ ನಡೆದ ಸಂದರ್ಭ ಕೊಡಗಿನ ನಿಯೋಗ ಕೇಂದ್ರ ಸರ್ಕಾರಕ್ಕೆ ಸಮರ್ಪಕ ನಿಯೋಗವನ್ನು ತೆಗೆದುಕೊಂಡು ಹೋಗಿ ಸಲ್ಲಿಸಿದ ಮನವಿ ಮತ್ತು ಪ್ರಯತ್ನಗಳ ಹಿನ್ನೆಲೆಯಲ್ಲಿ ಕೋವಿ ವಿನಾಯಿತಿಯನ್ನು ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಅದು ಇಂದಿಗೂ ಮುಂದುವರಿದಿರುವುದಾಗಿ ತಿಳಿಸಿದರು. ::: ಮಾಹಿತಿ ಕೊರತೆ ::: ಕೋವಿಯನ್ನು ಹೊಂದಿಕೊಳ್ಳಲು ಪರವಾನಗಿಯನ್ನು ನೀಡುವ ಹಕ್ಕು ಜಿಲ್ಲಾಧಿಕಾರಿಗಳದ್ದು. ಆದರೆ, ಜಿಲ್ಲೆಗೆ ಬರುವ ಬಹುತೇಕ ಜಿಲ್ಲಾಧಿಕಾರಿಗಳಿಗೆ, ಕೊಡವರಿಗೆ ಕೋವಿ ಹೊಂದಲು ಇರುವ ವಿನಾಯಿತಿಯ ಬಗ್ಗೆ ಮಾಹಿತಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಹಕ್ಕು ಅಭಾದಿತವಾಗಿ ಮುಂದುವರೆಯಬೇಕಾದರೆ ನಮ್ಮನ್ನು ಪ್ರತಿನಿಧಿಸುವ ಸಂಸದರ ಪ್ರಯತ್ನ ಅಗತ್ಯವೆಂದರು . ಸಂಸದ ಪ್ರತಾಪ ಸಿಂಹ ಅವರು ದಿ ಗ್ಯಾಲೆಂಟ್ ಕೊಡವ ಅಂಡ್ ಹಿಸ್ ಗನ್‌ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿ, ಕೋವಿಯ ಹಕ್ಕು ಎನ್ನುವುದು ಕೊಡವ ಸಮುದಾಯಕ್ಕೆ ವಂಶಪಾರಂಪರ್ಯವಾಗಿ ಬಂದಿರುವುದನ್ನು ನಾನು ಅರಿತಿದ್ದೇನೆ. ಕೊಡಗಿಗೆ ಒಳ್ಳೆಯದನ್ನು ಮಾಡಬೇಕೆನ್ನುವ ಚಿಂತನೆಗಳನ್ನು ತಾನು ಹೊಂದಿದ್ದೇನೆ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪಾಲಚಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ದೇಶದ 125 ಕೋಟಿ ಜನಸಂಖ್ಯೆ, 1652 ಭಾಷೆ, 3 ಸಾವಿರ ಜಾತಿ, 25 ಸಾವಿರ ಉಪ ಜಾತಿಗಳ ನಡುವೆ ಕೇವಲ 2 ಲಕ್ಷ ಆಸುಪಾಸಿನ ಜನಸಂಖ್ಯೆ ಹೊಂದಿರುವ ಕೊಡವ ಸಮುದಾಯಕ್ಕೆ ಮಾತ್ರ ಕೋವಿಯ ವಿನಾಯಿತಿ ಹಕ್ಕು ಇರುವುದು ಅತ್ಯಂತ ಹೆಮ್ಮೆಯ ವಿಚಾರವೆಂದು ತಿಳಿಸಿದರು. ಈ ಹಕ್ಕನ್ನು ಸಂರಕ್ಷಿಸುವ ಅಗತವ್ಯಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಭಾರತೀಯ ಸಶಸ್ತ್ರ ಕಾಯ್ದೆಯಡಿ ಕೊಡಗಿನ ಕೊಡವರಿಗೆ ಕೊಡಮಾಡಲಾಗಿರುವ ಕೋವಿ ಹೊಂದುವ ವಿನಾಯಿತಿ ಹಕ್ಕಿನ ರಕ್ಷಣೆೆಗೆ ಒತ್ತನ್ನು ನೀಡಲಾಗುತ್ತದೆ. ಈ ಬಗೆಗೆಗಿನ ಮಾಹಿತಿಯ ಕೊರತೆಯಿಂದಷ್ಟೆ ಸಮಸ್ಯೆಗಳಾಗುತ್ತಿದೆಯೆಂದು ತಿಳಿಸಿ, ಕೋವಿಯ ಹಕ್ಕಿನ ಸಂರಕ್ಷಣೆೆಗೆ ಅಗತ್ಯ ಸಲಹೆ ಸೂಚನೆಗಳೊಂದಿಗೆ ಎಲ್ಲರ ಸಹಕಾರವೂ ಅಗತ್ಯವೆಂದರು. ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮತ್ತು ಪ್ರಮುಖರು ಗ್ರಂಥ ಕರ್ತೃ ಪಾಲೆಕಂಡ ಎಸ್.ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು. ಸಭೆೆಯ ಆರಂಭಕ್ಕೂ ಮೊದಲು ಅತಿಥಿ ಗಣ್ಯರು ಸಭಾಂಗಣದ ಮುಂಭಾಗದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮ ಆಯೋಜಕರಲ್ಲಿ ಒಬ್ಬರಾದ ಜಮ್ಮಡ ಅಯ್ಯಣ್ಣ ಉಪಸ್ಥಿತರಿದ್ದರು.
Next Story





