ಮಳೆಗಾಗಿ ಪರ್ಜನ್ಯ ಜಪ: ವಿವಾದದಿಂದ ದೂರ ಉಳಿದ ಎಂ.ಬಿ.ಪಾಟೀಲ್

ಮಡಿಕೇರಿ ಜೂ.4 : ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಲು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಸಲಹೆ ಮೇರೆಗೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ್ ಜ್ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪತ್ನಿ ಜಯಶ್ರೀ ಸಹಿತರಾಗಿ ಪರ್ಜನ್ಯ ಜಪನಡೆಸಿದರು. ವರುಣನ ಕೃಪೆಗಾಗಿ ತಲಕಾವೇರಿಯಲ್ಲಿ ಪರ್ಜನ್ಯ ಜಪ ಆಯೋಜನೆ ಮಾಡಿದ್ದ ಸಚಿವ ಎಂ.ಬಿ.ಪಾಟೀಲ್ ವಿವಾದದಿಂದ ದೂರ ಉಳಿಯಲು ಎಂಜಿನಿಯರ್‌ಗಳ ಮೂಲಕ ಪರ್ಜನ್ಯ ಜಪ ಮಾಡಿಸಿದರು. ಕಾರ್ಯಪಾಲಕ ಎಂಜಿನಿಯರ್ ಬಸವರಾಜ, ಪತ್ನಿ ಜಯಶ್ರೀ ಪರ್ಜನ್ಯ ಜಪ ನಡೆಸಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅರ್ಚಕರಾದ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಮುಂಜಾನೆ 9 ಗಂಟೆಯಿಂದ 11 ಗಂಟೆಯ ವರೆಗೆ ಪೂಜಾ ವಿಧಿ ವಿಧಾನಗಳು ನಡೆದವು. ಮಳೆಗಾಗಿ ಪೂಜೆ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವಿರೋಧ ವ್ಯಕ್ತವಾದ ಕಾರಣ ವೈಯಕ್ತಿಕವಾಗಿ ಪೂಜೆ ಮಾಡಿಸುವುದಾಗಿ ಸಚಿವ ಎಂ.ಬಿ.ಪಾಟಿಲ್ ಹೇಳಿದ್ದರು. ಮಧ್ಯಾಹ್ನದ ನಂತರ ತಲಕಾವೇರಿ-ಭಾಗಮಂಡಲಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದರು. ತಲಕಾವೇರಿಯಲ್ಲಿ ಶ್ರೀಮತಿ ಸಹಿತ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಎಂ.ಬಿ.ಪಾಟಿಲ್ ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾದರೆ ಕರ್ನಾಟಕ ರಾಜ್ಯಕ್ಕೆ ಕುಡಿಯಲು ನೀರು ದೊರೆಯುತ್ತದೆ, ಅಲ್ಲದೆ ಉತ್ತಮ ಕೃಷಿ ಫಸಲಿನಿಂದ ನಾಡು ಸಮೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಆದಿಚುಂಚನಗಿರಿ ಮಠದ ಮಠಾಧೀಶರಾದ ಶ್ರೀನಿರ್ಮಲಾನಂದ ಸ್ವಾಮೀಜಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡ ಮತ್ತಿತರರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
Next Story





