ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತಣ್ಣೀರುಬಾವಿಯ ಮುಳುಗುತಜ್ಞರು!
ಬಾರ್ಜ್ ದುರಂತ

ಹಸನ್ ಪಿ.ಟಿ., ಜಾವಿದ್, ವಾಸಿಮ್, ಸಾದಿಕ್, ಜಾಕಿರ್
ಮಂಗಳೂರು, ಜೂ.4: ಉಳ್ಳಾಲ ಕಡಲ ತೀರದಿಂದ ಸುಮಾರು 1.6 ಕಿ.ಮೀ ದೂರದಲ್ಲಿ ಶನಿವಾರ ಅಪರಾಹ್ನ ಸಂಭವಿಸಿದ ‘ಬಾರ್ಜ್ ದುರಂತ’ದಲ್ಲಿ ಸಿಲುಕಿದ್ದ 27 ಕಾರ್ಮಿಕರ ಪೈಕಿ 8 ಮಂದಿಯನ್ನು ಪಣಂಬೂರು ಸಮೀಪದ ತಣ್ಣೀರುವಾವಿಯ 5 ಮಂದಿ ಮುಳುಗುತಜ್ಞರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ತಣ್ಣೀರುಬಾವಿಯ ಹಸನ್ ಪಿ.ಟಿ., ಜಾವಿದ್, ವಾಸಿಮ್, ಸಾದಿಕ್, ಜಾಕಿರ್ ಎಂಬವರೇ ಈ ಮುಳುಗುತಜ್ಞರು. ಶನಿವಾರ ಸಂಜೆ ಸುಮಾರು 7 ಗಂಟೆಗೆ ಇವರಿಗೆ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ. ತಕ್ಷಣ ಇವರು ವಾಹನವನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ಉಳ್ಳಾಲಕ್ಕೆ ತೆರಳಿದ್ದಾರೆ. ಆದರೆ, ಸಮುದ್ರ ಪ್ರಕ್ಷುಬ್ಧದಲ್ಲಿದ್ದ ಕಾರಣ ಇವರ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಅಲ್ಲದೆ ಕತ್ತಲೂ ಆಗಿತ್ತು. ಯಾವುದೇ ವ್ಯವಸ್ಥೆಯೇ ಇರಲಿಲ್ಲ. ಆದರೂ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸದೆ ವಾಪಸ್ ಬರಲು ಈ ಐವರಿಗೆ ಮನಸ್ಸಾಗಲಿಲ್ಲ. ಆದದ್ದಾಗಲಿ ಎಂದು ಭಾವಿಸಿ ಕಡಲ ತೀರದಲ್ಲೇ ರಾತ್ರಿ ಕಳೆದರು. ಬೆಳಗಾಗುತ್ತಲೇ ರಕ್ಷಣಾ ಕಾರ್ಯಕ್ಕೆ ಸಜ್ಜಾದರು.ಬಾರ್ಜ್ನತ್ತ ಕೋಸ್ಟ್ಗಾರ್ಡ್ ಬೋಟ್ ಮೂಲಕ ತೆರಳಲು ಮುಂದಾದಾಗ ಕೋಸ್ಟ್ಗಾರ್ಡ್ ಕೇಂದ್ರದ ಮುಖ್ಯಸ್ಥರ ಅನುಮತಿ ಬೇಕು ಎಂಬ ಸೂಚನೆ ಬಂತು. ಅದೆಲ್ಲಾ ಆಗುವಾಗ ವಿಳಂಬವಾಗಬಹುದು ಎಂದು ಭಾವಿಸಿದ ಇವರು ಕರಾವಳಿ ರಕ್ಷಣಾ ಪಡೆಯ ಗಮನಕ್ಕೆ ತಂದು ಅವರ ಬೋಟ್ ಮೂಲಕ ಬಾರ್ಜ್ ಬಳಿ ತಲುಪಿ 8 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ಸಿಯಾದರು. ‘ನಮಗೆ ಮಾಹಿತಿ ಬಂದ ತಕ್ಷಣ ನಾವು ಕಾರ್ಯಾಚರಣೆಗೆ ಸಿದ್ಧರಾದೆವು. ಆದರೆ ಕತ್ತಲಾದ ಕಾರಣ ಸಮುದ್ರಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ರಾತ್ರಿ ಅಲ್ಲೇ ಕಳೆದೆವು. ಇಂದು ಮುಂಜಾನೆ ಎದ್ದು ಕೋಸ್ಟ್ಗಾರ್ಡ್ನ ಬೋಟ್ನಲ್ಲಿ ತೆರಳಲು ನಿರ್ಧರಿಸಿದ್ದರೂ ಅವರದ್ದೇನೋ ಕೇಂದ್ರದ ಅನುಮತಿ ಪಡೆಯಬೇಕಿತ್ತಂತೆ. ಈ ವಿಷಯವನ್ನು ನಾವು ಕರಾವಳಿ ರಕ್ಷಣಾ ಪಡೆಯ ಗಮನಕ್ಕೆ ತಂದೆವು. ಉಳ್ಳಾಲದ ಮೂಲಕ ಕಡಲಿಗೆ ಇಳಿಯಲು ಸಾಧ್ಯವಾಗದ ಕಾರಣ ನಾವು ನೇರ ಬಂದರು ದಕ್ಕೆಯ ಮೂಲಕ ಅಳಿವೆಬಾಗಿಲಿನತ್ತ ಕರಾವಳಿ ರಕ್ಷಣಾ ಪಡೆಯ ಬೋಟ್ನಲ್ಲಿ ತೆರಳಿ ಬಳಿಕ ಈಜುತ್ತಲೇ ರೋಪ್ ಸಹಾಯದಿಂದ 8 ಮಂದಿಯನ್ನು ರಕ್ಷಿಸಿದೆವು’ ಎಂದು ತಂಡದ ನಾಯಕ ಕಸಬಾ ಬೆಂಗರೆ ಹಸನ್ ಪಿ.ಟಿ.(40)ರಕ್ಷಣಾ ಕಾರ್ಯವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡರು. ‘ಆ ಬಾರ್ಜ್ನಲ್ಲಿದ್ದ ಬೆಂಗರೆಯ ಶೋಭಿತ್ ಅವರಿಗೆಲ್ಲಾ ಧೈರ್ಯ ನೀಡಿ ನಮ್ಮ ತಂಡದ ಕಾರ್ಯಾಚರಣೆ ಬಗ್ಗೆಯೂ ಆಗಲೇ ವಿವರಿಸಿದ್ದರಂತೆ. ನಮ್ಮನ್ನು ಕಾಣುತ್ತಲೇ ಶೋಭಿತ್ ಹೊರತುಪಡಿಸಿ 7 ಮಂದಿಯ ಕಣ್ಣಾಲಿಗಳು ತೇಲಿ ಬಂದವು. ಅವರಿಗೆ ಸುರಕ್ಷಿತವಾಗಿ ಹೊರಗೆ ಬರುವ ವಿಶ್ವಾಸವೇ ಇರಲಿಲ್ಲ. ಎಲ್ಲರೂ ಆತಂಕಗೊಂಡಿದ್ದರು. ಯಾರಿಗೂ ಬದುಕುಳಿಯುವ ವಿಶ್ವಾಸವಿರಲಿಲ್ಲ. ರಾತ್ರಿ ಬಿಸ್ಕೆಟ್, ಹಣ್ಣು ಹಂಪಲು ತಿಂದು ಕಳೆದಿದ್ದರು. ಹಸಿವಿನಿಂದ ಕಂಗೆಟ್ಟಿದ್ದ ಅವರು ನಮ್ಮನ್ನು ನೋಡಿ ಸಂತಸಗೊಂಡರು. ಈಜುತ್ತಲೇ ಅವರನ್ನು ಬಾರ್ಜ್ನಿಂದ ಬೋಟ್ಗೆ ಹತ್ತಿಸಿದೆವು. ಈ ಸಂದರ್ಭ ಒಂದಲ್ಲ, ಎರಡು ಬಾರಿ ನಾವಿದ್ದ ಬೋಟ್ನ ಡೀಸೆಲ್ ಖಾಲಿಯಾಯಿತು. ಹಾಗಾಗಿ ಸುಮಾರು 1 ಗಂಟೆಗಳ ಕಾಲ ಹೆಚ್ಚುವರಿಯಾಗಿ ನಾವು ಸಮುದ್ರದಲ್ಲಿ ಕಳೆಯಬೇಕಾಯಿತು’ ಎಂದು ಹಸನ್ ಹೇಳಿದರು. ‘ನಮಗೆ ಘಟನೆ ನಡೆದ ತಕ್ಷಣ ಮಾಹಿತಿ ಸಿಕ್ಕಿದ್ದರೆ, 23 ಮಂದಿ ರಾತ್ರಿ ಕಡಲಲ್ಲಿ ಕಾಲ ಕಳೆಯಬೇಕಾಗಿರಲಿಲ್ಲ. ಶನಿವಾರ ಸಂಜೆಯೊಳಗೆ ಎಲ್ಲರನ್ನೂ ರಕ್ಷಿಸಿ ದಡ ಸೇರಿಸುತ್ತಿದ್ದೆವು. ನಾವು ಇಂತಹ ಸಂದರ್ಭ ಪ್ರಾಣದ ಹಂಗುತೊರೆದು ಕಾರ್ಯಾಚರಣೆಗೆ ಇಳಿಯುತ್ತಿದ್ದೇವೆ. ನಿನ್ನೆಯಿಂದ ಕಡಲಿನ ಅಬ್ಬರ ಜೋರಿತ್ತು. ಈವತ್ತು ಬೆಳಗ್ಗೆ ಕೂಡ ಕಡಲು ಅದೇ ರೀತಿ ಇತ್ತು. ಆದರೂ ನಾವು ಅವರನ್ನು ರಕ್ಷಿಸಲು ಪಣತೊಟ್ಟೆವು. ಎಲ್ಲರನ್ನೂ ರಕ್ಷಿಸಿದ ಬಳಿಕವೇ ನಾವು ನಿಟ್ಟುಸಿರು ಬಿಟ್ಟೆವು’ ಎಂದು ಹಸನ್ ನುಡಿದರು. ಈ ಪವಿತ್ರ ರಮಝಾನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರನ್ನು ಪಾರು ಮಾಡಿದ ತೃಪ್ತಿ ನಮಗೆ ಇದೆ. ಕೂಲಿ ಕಾರ್ಮಿಕರಾಗಿರುವ ನಾವು ಈಗಾಗಲೆ ಅನೇಕ ಕಡೆ ನೂರಾರು ಮಂದಿಯನ್ನು ರಕ್ಷಿಸಿದ್ದೇವೆ. ನಮಗೆ ರಕ್ಷಣಾ ಸಲಕರಣೆ ಕೊಡಿ, ಆರ್ಥಿಕ ನೆರವು ನೀಡಿ ಎಂದು ಮನವಿ ಮಾಡಿದ್ದೆವು. ಆದರೆ, ಯಾರೂ ನಮ್ಮ ಅಳಲನ್ನು ಕೇಳಿಸಿಕೊಳ್ಳುತ್ತಿಲ್ಲ. ಶನಿವಾರ ಮತ್ತು ರವಿವಾರದ ಕಾರ್ಯಾಚರಣೆಗೆ ನಾವೇ 7-8 ಸಾವಿರ ರೂಪಾಯಿ ಸ್ವಂತ ಖರ್ಚು ಮಾಡಿದ್ದೇವೆ. ನಮ್ಮನ್ನು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಅಭಿನಂದಿಸಿದ್ದಾರೆ. ತಮ್ಮ ಕಚೇರಿಗೆ ಬರಲು ಹೇಳಿದ್ದಾರೆ. ಸೋಮವಾರ ಹೋಗುತ್ತೇವೆ, ನಮಗೆ ರಕ್ಷಣಾ ಸಲಕರಣೆ ಕೊಡಿ, ಇಂತಹ ಸಂದರ್ಭ ಶಕ್ತಿಮೀರಿ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ ಎಂದು ಹಸನ್ ಹೇಳಿದರು. ಬ್ಯಾಗ್ ಕಾಣೆ: ದುರಂತಕ್ಕೀಡಾದ ಬಾರ್ಜ್ನಲ್ಲಿ ಕಂಪೆನಿಗೆ ಸಂಬಂಧಿಸಿದ ದಾಖಲೆಪತ್ರಗಳು, ಲ್ಯಾಪ್ಟಾಪ್ ಇತ್ಯಾದಿಯನ್ನೊಳಗೊಂಡ ಸುಮಾರು 25 ಲಕ್ಷ ರೂ. ವೌಲ್ಯದ ಸೊತ್ತುಗಳುಲ್ಲ ಬ್ಯಾಗ್ ಕಾಣೆಯಾಗಿದ್ದು, ಅವುಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತದೆ.
Next Story





