ಬಂಡೆ ಮೇಲೇರಿ ನಿಂತ ಬಾರ್ಜ್ ತೆರವಿಗೆ ‘ಅಲೆ’ ಅಡ್ಡಿ

ಮಂಗಳೂರು, ಜೂ.4: ಉಳ್ಳಾಲ ಕಡಲ ತೀರದಿಂದ ಸುಮಾರು 1.6 ಕಿ.ಮೀ ದೂರದಲ್ಲಿ ಬಂಡೆಯ ಮೇಲೇರಿ ನಿಂತ ಬಾರ್ಜ್ ಸದ್ಯ ಯಥಾಸ್ಥಿತಿಯಲ್ಲಿದ್ದು, ಕಡಲ ಅಬ್ಬರದ ಭಾರೀ ಅಲೆಯಿಂದಾಗಿ ಅದರ ತೆರವು ಕಾರ್ಯಾಚರಣೆ ಸಮಸ್ಯೆಯಾಗಿ ಪರಿಣಮಿಸಲಿದೆ. ಬಾರ್ಜ್‌ನ ಒಂದು ಭಾಗ ನೀರಿನಲ್ಲಿದ್ದರೆ, ಇನ್ನೊಂದು ಭಾಗ ಕಲ್ಲಿನ ಮೇಲ್ಗಡೆ ವಾಲಿದೆ. ಸೆರೆಗಳು ಅಪ್ಪಳಿಸಿದಾಗ ನೀರಿನಲ್ಲಿರುವ ಭಾಗ ಹೆಚ್ಚು ವಾಲುತ್ತಿದ್ದು ಮುಳುಗುತ್ತಿರುವಂತೆ ಭಾಸವಾಗುತ್ತಿದೆ. ಸದ್ಯ ತೆರವು ಕಾರ್ಯಾಚರಣೆ ಕಷ್ಟ ಸಾಧ್ಯ. ಬೃಹತ್ ಗಾತ್ರದ ಅಲೆಗಳಿಗೆ ಬಾರ್ಜ್ ಮಗುಚಬಹುದು ಎಂದು ಹೇಳಲಾಗುತ್ತಿದೆ. ಜನವರಿಯಲ್ಲಿ ಬಂದ ಬಾರ್ಜ್ ಮೇ ಅಂತ್ಯಕ್ಕೆ ಕಾಮಗಾರಿ ನಿಲ್ಲಿಸಿ ಸ್ಥಳದಿಂದ ಪಣಂಬೂರಿಗೆ ಸಾಗಬೇಕಿತ್ತು, ಕಂಪೆನಿಗೆ ಸಂಬಂಧಪಟ್ಟ ಇತರ ಬೋಟುಗಳನ್ನು ಸಾಗಿಸಲಾಗಿದ್ದರೂ ಬಾರ್ಜನ್ನು ಮಾತ್ರ ಸಾಗಿಸದೆ ಬಿಡಲಾಗಿದೆ. ಶನಿವಾರ ಬಾರ್ಜ್ ಕಲ್ಲಿನ ಮೇಲೇರುವಂತೆ ಮಾಡಿದ ಬಳಿಕ ಜನರೇಟರ್ ಸ್ಥಗಿತಗೊಳಿಸಲಾಗಿದೆ. ಒಳಭಾಗದಲ್ಲಿ ನೀರು ಬರಲು ಆರಂಭಗೊಂಡ ಬಳಿಕ ಅಪಾಯದ ಮುನ್ಸೂಚನೆ ನೀಡಲಾಗಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಬಾರ್ಜ್‌ಗೆ ನಾಲ್ಕು ಭಾಗಗಳಲ್ಲಿ ರೋಪ್ ಕಟ್ಟಲಾಗಿತ್ತು, ಎರಡು ರೋಪುಗಳು ಮೂರು ದಿನಗಳ ಹಿಂದೆಯೇ ತುಂಡಾಗಿವೆ. ಒಂದು ರೋಪು ಶನಿವಾರ ಬೆಳಗ್ಗೆ ತುಂಡಾಗಿದ್ದು ಈ ಸಂದರ್ಭ ಕಂಪೆನಿಗೆ ಸಂಬಂಧಪಟ್ಟ ಮೂರು ಬೋಟುಗಳು ಕಾರ್ಯಾಚರಣೆಗೆ ಬಂದರೂ ಅಲ್ಲೇ ಸುತ್ತಾಡಿ ಹಿಂದಿರುಗಿವೆ. ರೋಪು ಬಿಚ್ಚಿ ಬಾರ್ಜ್ ಸಾಗಿಸಬಹುದಾಗಿದ್ದರೂ ಹಾಗೆ ಮಾಡಿಲ್ಲ, ಬದಲಾಗಿ ಚಾಲಕ ಬಾರ್ಜನ್ನು ಕಲ್ಲಿನ ಮೇಲೇರುವಂತೆ ಮಾಡಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಕೈಕೋ ನಿವಾಸಿ ಸಲಾಂ. ಉಳ್ಳಾಲ-ಅಳಿವೆಬಾಗಿಲು ಸುತ್ತಮುತ್ತ 6 ಬೋಟುಗಳು ಮುಳುಗಡೆಯಾಗಿವೆ. ಆರು ತಿಂಗಳ ಹಿಂದೆ ರೀಫ್ ಕಾಮಗಾರಿಗೆ ಅಳವಡಿಸಲಾಗಿದ್ದ ಕಲ್ಲುಗಳ ಬಗ್ಗೆ ಮಾಹಿತಿ ಇಲ್ಲದ ಕಾರಣದಿಂದ ಚೈನಾ ಮೂಲದ ಬೋಟೊಂದು ಕಲ್ಲಿಗೆ ಢಿಕ್ಕಿ ಹೊಡೆದು ಮುಳುಗಡೆಯಾಗಿದೆ. 1992ರಲ್ಲಿ ಕೂಡ ಉಳ್ಳಾಲದಲ್ಲಿ ಹಡಗೊಂದು ಮುಳುಗಡೆಯಾಗಿತ್ತು. ಇದುವರೆಗೆ ಮುಳುಗಡೆಯಾಗಿರುವ ಯಾವುದೇ ಹಡಗು ಅಥವಾ ಬೋಟುಗಳನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಿಲ್ಲ. ಈ ಕಾರ್ಯಾಚರಣೆಗೆ ದುಬಾರಿಯಾದ ಕಾರಣ ಎಲ್ಲರೂ ಅದನ್ನು ಕೈ ಬಿಡುತ್ತಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಶನಿವಾರವೇ ಭಾರೀ ಸಂಖ್ಯೆಯ ಜನರು ಆಗಮಿಸಿದ್ದರು. ರವಿವಾರ ಮುಂಜಾನೆಯವೇ ಜನರು ಉಳ್ಳಾಲ ಸಮುದ್ರ ತೀರಕ್ಕೆ ಆಗಮಿಸಿದ್ದು, ಸಂಜೆಯವರೆಗೂ ಬಾರ್ಜನ್ನು ವೀಕ್ಷಿಸುತ್ತಿದ್ದರು.
Next Story





