ಫಿಲಿಪ್ಪೀನ್ಸ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ್ದು ಜುಗಾರಿ ದಾಸ: ಪೊಲೀಸ್

ಮನಿಲಾ (ಫಿಲಿಪ್ಪೀನ್ಸ್), ಜೂ. 4: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಜುಗಾರಿ ಅಡ್ಡೆಯಲ್ಲಿ ಇತ್ತೀಚೆಗೆ ನಡೆದ ದಾಳಿ ಭಯೋತ್ಪಾದಕ ಘಟನೆಯಲ್ಲ ಎಂದು ಪೊಲೀಸರು ರವಿವಾರ ತಿಳಿಸಿದರು.
ದಾಳಿಕೋರನು ಜುಗಾರಿಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಸಾಲದ ಬಾಧೆಗೆ ಸಿಲುಕಿದ ಮೂರು ಮಕ್ಕಳ ತಂದೆಯಾಗಿದ್ದಾನೆ ಎಂದರು.
ಜುಗಾರಿ ಅಡ್ಡೆಯಲ್ಲಿ ನಡೆದ ಬೆಂಕಿ ಮತ್ತು ಗುಂಡಿನ ದಾಳಿಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ.
‘‘ಇದು ಭಯೋತ್ಪಾದಕ ಘಟನೆಯಲ್ಲ, ಒಬ್ಬ ವ್ಯಕ್ತಿ ನಡೆಸಿದ ಘಟನೆ ಎಂಬುದನ್ನು ನಾವು ದೃಢಪಡಿಸುತ್ತೇವೆ’’ ಎಂದು ಮನಿಲಾ ಪೊಲೀಸ್ ಮುಖ್ಯಸ್ಥ ಆಸ್ಕರ್ ಆ್ಯಲ್ಬಯಾಲ್ಡ್ ಸುದ್ದಿಗಾರರಿಗೆ ತಿಳಿಸಿದರು.
ದಾಳಿಕಾರನನ್ನು ಮನಿಲಾ ನಿವಾಸಿ 43 ವರ್ಷದ ಜೆಸ್ಸಿ ಕಾರ್ಲೋಸ್ ಎಂದು ಗುರುತಿಸಲಾಗಿದೆ. ಆತ ಜುಗಾರಿಯ ದಾಸನಾಗಿರುವ ಹಿನ್ನೆಲೆಯಲ್ಲಿ, ಆತನ ಕುಟುಂಬದ ಮನವಿಯಂತೆ ಎಪ್ರಿಲ್‌ನಿಂದ ಎಲ್ಲ ಜುಗಾರಿ ಅಡ್ಡೆಗಳಿಂದ ಆತನನ್ನು ನಿಷೇಧಿಸಲಾಗಿತ್ತು.
‘‘ಜುಗಾರಿಯ ಚಟ ಅಂಟಿಸಿಕೊಂಡ ಆತ ಭಾರೀ ಸಾಲ ಮಾಡಿಕೊಂಡಿದ್ದನು. ಇದರಿಂದ ಆತನ ಹೆಂಡತಿ ಮತ್ತು ಹೆತ್ತವರು ಮುನಿಸಿಕೊಂಡಿದ್ದರು’’ ಎಂದು ಪೊಲೀಸ್ ಅಧಿಕಾರಿ ನುಡಿದರು.
ಶುಕ್ರವಾರ ಮನಿಲಾದ ರಿಸಾರ್ಟ್ಸ್ ವರ್ಲ್ಡ್ ಕ್ಯಾಸಿನೊ ಮತ್ತು ಹೊಟೇಲ್ ಆವರಣಕ್ಕೆ ಎಂ4 ಸ್ವಯಂಚಾಲಿತ ರೈಫಲ್‌ನೊಂದಿಗೆ ಮುಖ ಮುಚ್ಚಿಕೊಂಡು ನುಗ್ಗಿದ ಆತ ಆವರಣದಲ್ಲಿರುವ ಹಲವು ಕೋಣೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟನು.
ಅಂತಿಮವಾಗಿ ಹೊಟೇಲ್ ಆವರಣದಲ್ಲೇ ತನಗೆ ತಾನು ಬೆಂಕಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡನು.







