ಸೊಸೆಯ ಅತ್ಯಾಚಾರಗೈದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಪತ್ನಿ

ಪೇಶಾವರ, ಜೂ.4: ಸೊಸೆಯನ್ನು ಅತ್ಯಾಚಾರಗೈದ ವ್ಯಕ್ತಿಯನ್ನು ಪತ್ನಿಯೇ ಗುಂಡಿಕ್ಕಿ ಕೊಂದ ಘಟನೆ ಪಾಕಿಸ್ತಾನದ ಪಖ್ತುಂಖ್ವಾದ ಶಾಂಗ್ಲಾ ಗ್ರಾಮದಲ್ಲಿ ನಡೆದಿದೆ. “ಕುಟುಂಬ ಹಾಗೂ ಸಂಬಂಧಗಳನ್ನು ಗೌರವಿಸದ್ದಕ್ಕಾಗಿ” ತಾನು ಪತಿಯನ್ನು ಕೊಂದಿರುವುದಾಗಿ ಇಲ್ಲಿನ ನಿವಾಸಿ ಬೇಗಂ ಬೀಬಿ ಒಪ್ಪಿಕೊಂಡಿದ್ದಾರೆ. ಬೇಗಂ ಬೀಬಿಯವರ ಪುತ್ರ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಪತಿ ಪುತ್ರನ ಪತ್ನಿಯ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ. “ನನ್ನ ಪತ್ನಿ ಎದುರಿಸುತ್ತಿದ್ದ ಸಂಕಷ್ಟಗಳ ಬಗ್ಗೆ ಅರಿವಿದ್ದರೂ ಹೆತ್ತವರು ಎಂಬ ಗೌರವದಿಂದ ನಾನು ತಂದೆಯನ್ನು ಕೊಂದಿರಲಿಲ್ಲ. ತರಬೇತಿ ಮುಗಿದು ಮನೆಗೆ ಹಿಂದಿರುಗಿದ ನಂತರ ಬೇರೆಡೆಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿದ್ದೆ” ಎಂದು ಅತ್ಯಾಚಾರ ಸಂತ್ರಸ್ತೆಯ ಪತಿ ಪ್ರತಿಕ್ರಿಯಿಸಿದ್ದಾರೆ. “ಆತನ ಪೈಶಾಚಿಕ ಕೃತ್ಯವನ್ನು ನಿಲ್ಲಿಸಲು ನಿರಾಕರಿಸಿದಾಗಲೇ ನಾನು ಆತನನ್ನು ಕೊಲ್ಲುವುದಾಗಿ ನಿರ್ಧರಿಸಿದೆ” ಎಂದು ಬೇಗಂ ಬೀಬಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬೇಗಂ, ಆಕೆಯ ಪುತ್ರ ಹಾಗೂ ಸೊಸೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಪೊಲೀಸರು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





