ಜಾತ್ಯಾತೀತತೆಯ ನೆಲೆಯಲ್ಲಿ ನ್ಯಾಯ ನೀಡುವ ಕಾರ್ಯ ಮಾಡಿ-ಶಾಸಕಿ ಶಕುಂತಳಾ ಶೆಟ್ಟಿ
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಸಂಘಟನೆಯ ಉದ್ಘಾಟನೆ

ಪುತ್ತೂರು, ಜೂ.4: ದೇಶಕ್ಕೆ ಅತ್ಯಂತ ಮಹತ್ವದ ಸಂವಿಧಾನವನ್ನು ನೀಡಿರುವ ಮತ್ತು ಸಮಾಜದ ಎಲ್ಲಾ ವರ್ಗದ ಹಿತಾರಕ್ಷಣೆಯನ್ನು ಕಾಪಾಡುವ ಕಾರ್ಯ ಮಾಡಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮೀತವಾಗಿರಲಿಲ್ಲ. ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜಾತ್ಯಾತೀತತೆಯ ನಿಟ್ಟಿನಲ್ಲಿ ನ್ಯಾಯ ಒದಗಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಹೇಳಿದರು. ಪುತ್ತೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘಟನೆಯಾದ ‘ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ' ಯನ್ನು ಅವರು ರವಿವಾರ ಪುತ್ತೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು. ನಾನು ರಾಜಕೀಯ ಮಾಡದೆ ಸಮಾಜದ ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ 4,309 ಜನರಿಗೆ 94ಸಿಯಲ್ಲಿ ಹಕ್ಕುಪತ್ರ ನೀಡಿದ್ದೇವೆ. ಯಾರು ನ್ಯಾಯಯುತವಾಗಿ 94ಸಿಯಲ್ಲಿ ಫಲಾನುಭವಿಗಳಿದ್ದಾರೋ ಅಂತವರ ಪಟ್ಟಿ ನನಗೆ ನೀಡಿ. ಅವರಿಗೆ ಹಕ್ಕುಪತ್ರ ಸಿಗುವಂತೆ ಪ್ರಯತ್ನಿಸುವುದಾಗಿ ಸಂಘಟನೆಯ ಮುಖಂಡರಿಗೆ ತಿಳಿಸಿದರು. ದೇವರಾಜ ಅರಸು ಉಳುವವನೇ ಹೊಲದೊಡೆಯ ಎನ್ನುವ ಕ್ರಾಂತಿಕಾರಿ ಆದೇಶವನ್ನು ಮಾಡಿದ್ದರು. ಅದೇ ರೀತಿ ನಮ್ಮ ಸರ್ಕಾರ ಇರುವವನೇ ಮನೆಯೊಡೆಯ ಎನ್ನುವ ಕ್ರಾಂತಿಕಾರಿ ಆದೇಶವನ್ನು ಮಾಡುವ ಚಿಂತನೆ ನಡೆಸಿದೆ. ಪರಿಶಿಷ್ಠ ಜಾತಿ-ಪಂಗಡದ ಮೇಲಿನ ಕಾಳಜಿ, ಪ್ರೀತಿಯಿಂದ ಪುತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ಅನುದಾನ ಮೀಸಲಿಟ್ಟಿದ್ದೆ ಎಂದರು. ನ್ಯಾಯಯುತವಾದ ಉತ್ತಮ ಸಮಾಜ ನಿರ್ಮಾಣಕ್ಕೆ ಈ ಸಂಘಟನೆ ಭಾಷ್ಯ ಬರೆಯಲಿ ಎಂದು ಅವರು ಹಾರೈಸಿದರು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸುಜಾತ ಸಾಲಿಯಾನ್ ಅವರು ಮಾತನಾಡಿ ಸಂಘಟನೆಗಳಿದ್ದರೆ ಮಾತ್ರ ಅಶಕ್ತ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯ ಎಂದರು. ಸಂಘಟನೆಯ ಮೂಲಕ ಜಾತಿ, ಧರ್ಮ, ಪಂಥ, ಭೇಧವಿಲ್ಲದೆ ಬಡಜನತೆಯ ಹಿತಾ ಕಾಯುವ ಕೆಲಸವಾಗಬೇಕು ಎಂದು ಅವರು ಸಲಹೆ ನೀಡಿದರು. ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ನಿಯೋಜಿತ ಅಧ್ಯಕ್ಷ ಗಿರಿಧರ್ ನಾಯ್ಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಎರಡೂವರೆ ವರ್ಷದಿಂದ ದಲಿತ್ ಸೇವಾ ಸಮಿತಿಯಲ್ಲಿ ತಾನು ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ದುರುದ್ದೇಶದಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಯಿತು. ನಿಯತ್ತಿನಲ್ಲಿ ಯಾರು ಬೆಳೆಯುತ್ತಾರೋ ಅಂತವರನ್ನು ಬಲಿಪಶು ಮಾಡಲಾಗುತ್ತಿದ್ದು, ಆ ಕಾರಣದಿಂದಲೇ ದಲಿತ್ ಸೇವಾ ಸಮಿತಿ ಸಂಘಟನೆಗೆ ರಾಜೀನಾಮೆ ಕೊಟ್ಟು, ದುರ್ಬಲ, ಆಶಕ್ತ ವರ್ಗಗಳ ಪರವಾಗಿ ಹೋರಾಟ ಮಾಡಲು ತಾನು ಈ ಹೊಸ ಸಂಘಟನೆಯನ್ನು ಸ್ಥಾಪಿಸಿದ್ದೇನೆ ಎಂದರು. ಪುತ್ತೂರಿನಲ್ಲಿ ಆರಂಭಗೊಂಡ ಈ ಸಂಘಟನೆಯನ್ನು ಹಂತ ಹಂತವಾಗಿ ರಾಜ್ಯವ್ಯಾಪಿ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು. ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಐ.ಸಿ. ಕೈಲಾಸ್ ಕೆದಂಬಾಡಿ ಅವರು ಮಾತನಾಡಿದರು. ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ, ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯ ಕಾನೂನು ಸಲಹೆಗಾರ ಶ್ಯಾಮ್ ಪ್ರಸಾದ್ ಕೈಲಾರ್, ಜತ್ತಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ಮುಖಂಡ ಬಾಲಚಂದ್ರ ಸೊರಕೆ ಸ್ವಾಗತಿಸಿದರು. ಮೋಹನ್ ಕುಮಾರ್ ವಂದಿಸಿದರು. ರಮೇಶ್ ಕಾರ್ಯಕ್ರಮ ನಿರೂಪಿಸಿದರು.
Next Story





