ಭಾರತ ಸಂಸ್ಕೃತಿಯು ಗುರು ಪರಂಪರೆಯ ಅವಿಭಾಜ್ಯ ಅಂಗ: ಚಿಂತಕ ಡಾ.ಗುರುರಾಜ್ ಕರಜಗಿ

ದಾವಣಗೆರೆ.ಜೂ,4 : ಕಲಿಯುವುದಕ್ಕೆ ಮಿತಿಯಿಲ್ಲ. ಕಲಿಸುವುದಕ್ಕೂ ಮಿತಿಯಿಲ್ಲ. ಕಲಿತಷ್ಟು, ಕಲಿಸಿದಷ್ಟೇ ಜ್ಞಾನ ಹೆಚ್ಚಾಗುತ್ತದೆ ಎಂದು ಶಿಕ್ಷಣ ಚಿಂತಕ ಡಾ.ಗುರುರಾಜ್ ಕರಜಗಿ ಹೇಳಿದರು. ನಗರದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಡಾ. ಹೆಚ್.ವಿ. ವಾಮದೇವಪ್ಪ ಅವರಿಗೆ ಅಭಿನಂದನೆ ಹಾಗೂ ಶೈಕ್ಷಣಿಕ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ಸಂಸ್ಕೃತಿಯು ಗುರು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಗುರುಗಳಿಗೆ ಸಿಗುವ ಗೌರವ ಅನನ್ಯವಾದದ್ದು, ಜ್ಞಾನ ಪ್ರದಾನವಾದ ಸಮಾಜದಲ್ಲಿ ಶೌರ್ಯ ಪ್ರಧಾನ ಸಮಾಜ ಬದಲಾಯಿತು. ಸ್ವತಂತ್ರ್ಯ ಪೂರ್ವದಲ್ಲಿ ದೇಶ ಪ್ರೇಮ ಮೌಲ್ಯವಿತ್ತು. ಸ್ವಾತಂತ್ರ್ಯ ಬಂದ ಮೇಲೆ ಒಬ್ಬ ಶ್ರೀಮಂತ ಮಾದರಿಯಾಗಿತ್ತು. ಶಿಕ್ಷಕರು ಪಾಠ, ಭಾಷಣ ತಿಳಿಸುವುದರ ಜೊತೆಗೆ ಮೌಲ್ಯಗಳನ್ನು ತೋರಿಸಿಕೊಡಬೇಕು ಆಗ ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಕರ ವೃತ್ತಿ ನೀಡಿದಂತಹ ತೃಪ್ತಿ ಮತ್ತೆ ಬೇರೆ ಯಾವ ವೃತ್ತಿಯು ಕೊಡಲು ಸಾಧ್ಯವಿಲ್ಲ. ಹಾಗಾಗಿ ಮುಂದೊಂದು ಜನ್ಮವಿದ್ದರೆ ಶಿಕ್ಷಕನಾಗಿಯೇ ಹುಟ್ಟಬೇಕೆಂಬ ಆಸೆ ಇದೆ ಎಂದು ಆಶಯ ವ್ಯಕ್ತಪಡಿಸಿದರು. ಶಿಕ್ಷಕರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಉತ್ತಮ ಗುರುಗಳಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ಶಿಕ್ಷಕರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ತಮ್ಮ ವೃತ್ತಿಯ ಬಗ್ಗೆ ಗೌರವ ಇರಬೇಕು. ಶಿಕ್ಷಕರು ಕೊನೆಯವರೆಗೆ ವಿದ್ಯಾರ್ಥಿಗಳಾಗಿ ಇದ್ದಾಗ ಮಾತ್ರ ಉತ್ತಮ ಗುರುಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ತರಳಬಾಳು ಜಗದ್ಗುರು, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ವೀರಶೈವ ಸಂಘದ ಅಧ್ಯಕ್ಷ ಕೆ.ಆರ್.ಜಯದೇವಪ್ಪ, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಹೆಚ್. ರಾಜಾಸಾಬ್ ಮನೋಜ್ಞ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿದರು.
Next Story





