ದಾವಣಗೆರೆ:ಶಾಲಾ ಕೊಠಡಿ, ದೇವಸ್ಥಾನಗಳ ಉದ್ಘಾಟನೆ

ದಾವಣಗೆರೆ. ಜೂ,4: ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ವ್ಯಾಪ್ತಿಗೆ ಸೇರಿದ ಎಲ್ಲಾ ಗ್ರಾಮೀಣ ಪ್ರದೇಶಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ನಮ್ಮ ಮುಂದಿನ ಗುರಿ ಕೊನೆಭಾಗಕ್ಕೆ ನೀರು ಕಲ್ಪಿಸುವುದಾಗಿದೆ ಎಂದು ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು. ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮತ್ತು ಮಸಿಯಮ್ಮ ದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಶ್ರೀ ತರಳಬಾಳು ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಈಗಾಗಲೇ ಸಂಪೂರ್ಣವಾಗಿ ಅಭಿವೃದ್ದಿಗೊಳಿಸಲಾಗುತ್ತಿದೆ. ಇನ್ನು ಮುಂದೆ ರೈತರ ಅನುಕೂಲದ ದೃಷ್ಟಿಯಿಂದ ಕೊನೆಭಾಗಕ್ಕೆ ನೀರು ತಲುಪಿಸುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಪೂರಕವಾದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಮಾರು 200 ಕಿ.ಮೀ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಈ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಹ ನಡೆದಿಲ್ಲ ಎಂದ ಅವರು ಈ ಹಿಂದೆ ಈ ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಬಗ್ಗೆ ಉಡಾಫೆ ಮಾತನಾಡಿದ ಜನಪ್ರತಿನಿಧಿಗಳಿಗೆ ಗ್ರಾಮಸ್ಥರೇ ಉತ್ತರಿಸಬೇಕಾಗಿದೆ ಎಂದರು. ರಾಜ್ಯದಲ್ಲಿ 3 ವರ್ಷಗಳ ಕಾಲ ಮಳೆ ಇಲ್ಲದಿದ್ದರೂ ಸಹ ದಾವಣಗೆರೆಯಲ್ಲಿ ನೀರಿನ ಸಮಸ್ಯೆಯನ್ನು ದಿಟ್ಟವಾಗಿ ಎದುರಿಸಲಾಗಿದೆ. ದಾವಣಗೆರೆಯಲ್ಲಿ ಮಳೆ ಬಾರದಿರಲೂ ವಸ್ತು ಪ್ರದರ್ಶನ ಕಾರಣ ಎಂದು ಹೇಳಲಾಗುತ್ತಿದೆ. ಈ ವಸ್ತು ಪ್ರದರ್ಶನ ಇರುವುದು ಯಾರ ಜಾಗದಲ್ಲಿದೆ ಎಂದು ಮಾರ್ಮಿಕವಾಗಿ ಬಿಜೆಪಿಗೆ ಟಾಂಗ್ ನೀಡಿದರು. ಸಿರಿಗೆರೆ ಜಗದ್ಗುರುಗಳ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ರೈತರ ಖಾತೆಗೆ ನೇರವಾಗಿ ಬೆಳೆ ನಷ್ಟ ಪರಿಹಾರ ಮತ್ತು ಬೆಳೆವಿಮೆ ಪರಿಹಾರವನ್ನು ತಲುಪಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ನೂತನ ತಂತ್ರಾಂಶವೊಂದನ್ನು ಅಭಿವೃದ್ದಿ ಪಡಿಸಲಾಗಿದೆ ಎಂದರು. ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿ.ಪಂ ಸದಸ್ಯ ರೇಣುಕಮ್ಮ ಕರಿಬಸಪ್ಪ, ಎಪಿಎಂಸಿ ಸದಸ್ಯ ಎಂ.ಕೆ. ರೇವಣಸಿದ್ದಪ್ಪ, ಟಿ.ರಾಜಣ್ಣ, ಬಿ.ಜಿ.ಸಂಗನಗೌಡ್ರು, ರತ್ನಮ್ಮ ಪರಶುರಾಮಪ್ಪ, ಮಾಗಾನಹಳ್ಳಿ ಪರಶುರಾಮ್, ಶಾನಭೋಗ ಬಸವರಾಜಪ್ಪ, ಬಿ. ಪ್ರಭು, ಬಿ.ನಿಂಗಪ್ಪ, ಗಂಗನಕಟ್ಟೆ ಗುರುಸ್ವಾಮಿ, ಕಾಡಜ್ಜಿ ಚಂದ್ರಣ್ಣ, ಗಡಿಗುಡಾಳ್ ಮಂಜುನಾಥ್, ಬೂದಾಳ್ ಬಾಬು, ಎಲೆಬೇತೂರು ಗ್ರಾ.ಪಂ ಸದಸ್ಯರುಗಳು, ಉಪಸ್ಥಿತರಿದ್ದರು.
Next Story





