ವೈದ್ಯರ ವೃತ್ತಿ ನಿಷ್ಟೆ ಪಾಲಿಸಲು ಮಾರ್ಗದರ್ಶಿ ಸೂತ್ರಗಳು ಜಾರಿ

ಬೆಂಗಳೂರು, ಜೂ.4: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ವೃತ್ತಿ ನಿಷ್ಠೆ ನೆನಪು ಮಾಡಿಕೊಡುವ ಹಾಗೂ ತುರ್ತು ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ವರ್ತಿಸುವ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಕೊಡಲು ಸರಕಾರ ಮುಂದಾಗಿದೆ. ರಾಜ್ಯದ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವೈದ್ಯರ ನಿರ್ಲಕ್ಷ, ರೋಗಿಗಳ ಸಾವು, ಮಕ್ಕಳ ಅಪಹರಣ, ಆ್ಯಂಬುಲೆನ್ಸ್ ಸೇರಿ ಇನ್ನಿತರೆ ಸೇವೆಗಳ ನಿರಾಕರಣೆಯ ಪ್ರಸಂಗಗಳು ಆರೋಗ್ಯ ಇಲಾಖೆ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿವೆ. ಆರೋಗ್ಯ ಸಚಿವ ರಮೇಶ್‌ಕುಮಾರ್ ರೋಗಿಗಳ ಬಗ್ಗೆ ತೋರಿಸುತ್ತಿರುವ ಕನಿಷ್ಟ ಕಾಳಜಿಯನ್ನು ಇಲಾಖೆ ವ್ಯಾಪ್ತಿಯಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬಂಧಿ ತೋರುತ್ತಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದವು. ಅದರ ಭಾಗವಾಗಿ ಇತ್ತೀಚಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೃದ್ಧ ಪತಿಯನ್ನು ನೆಲದಲ್ಲಿ ಎಳೆದೊಯ್ದ ಪ್ರಸಂಗ ಇನ್ನಷ್ಟು ಮುಜುಗರಕ್ಕೀಡು ಮಾಡಿತ್ತು. ಸರಕಾರ ಕಾಲ ಕಾಲಕ್ಕೆ ವೈದ್ಯರಿಗೆ ಕರ್ತವ್ಯ ನಿರ್ವಸಹಣೆ, ಮಾನವೀಯ ಕಳಕಳಿ, ಸ್ಪಂದನಶೀಲ ಗುಣಗಳಿಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸುತ್ತಾ ಬರಲಾಗಿತ್ತು. ಹಲವು ಬಾರಿ ಅಮಾನತು, ವಜಾ ಸೇರಿದಂತೆ ಹಲವು ಶಿಕ್ಷೆಗಳಿಗೆ ಗುರಿ ಪಡಿಸಲಾಗಿತ್ತು. ಆದರೂ, ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು. ಹೀಗಾಗಿ, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ನೀತಿ ಸೂತ್ರ ರಚಿಸಲು ಇಲಾಖೆ ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ಸುತ್ತೋಲೆ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಚಿಕಿತ್ಸೆಗೆ ಮಾತ್ರವಲ್ಲದೆ, ಆಡಳಿತಾತ್ಮಕ ಹೊಣೆಗಾರಿಕೆ ಕುರಿತು ಉಪಕ್ರಮಗಳನ್ನು ಹಾಗೂ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳಿಗೆ ತರಬೇತಿ ನೀಡಲು ಈಗಾಗಲೇ ಇಲಾಖೆ ಸರಕಾರದಿಂದ ಅನುಮೋದನೆ ಪಡೆದುಕೊಂಡಿದೆ. ಸುತ್ತೊಲೆಯಲ್ಲಿ ಏನಿದೆ: ವೈದ್ಯರು ಹಾಗೂ ಸಿಬ್ಬಂದಿ ರೊಗಿಗಳ ಜತೆ ಹೇಗೆ ವರ್ತಿಸಬೇಕು. ಅವರೊಂದಿಗೆ ಬರುವ ಪಾಲಕರನ್ನು ಹೇಗೆ ನಿಭಾಯಿಸಬೇಕು. ಅವರಿಗೆ ಹೇಗೆ ಗೌರವ ಕೊಡಬೇಕು. ತುರ್ತು ಚಿಕಿತ್ಸೆ ಸಂದರ್ಭಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಈ ಸುತ್ತೊಲೆಯಲ್ಲಿ ಸಮಗ್ರ ಮಾಹಿತಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





