ಬಾರ್ಜ್ ಮಗುಚಿ ಬಿದ್ರೆ ಅಪಾಯ ಇತ್ತು: ಶೋಭಿತ್

ಮಂಗಳೂರು, ಜೂ.4: ಬಾರ್ಜ್‌ನೊಳಗೆ ನೀರು ತುಂಬಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಯಾಕೆಂದರೆ, ಬಾರ್ಜ್ ತೀರದಿಂದ ಅಣತಿ ದೂರದಲ್ಲಿತ್ತು. ಆದರೆ, ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ವಾಲಿಕೊಂಡಿದ್ದ ಬಾರ್ಜ್ ಮಗುಚಿ ಬಿದ್ದಿದ್ದರೆ ಅದರಲ್ಲಿದ್ದ ಟನ್ ತೂಕದಷ್ಟಿರುವ ಸಾಮಗ್ರಿಗಳು ನಮ್ಮ ಮೇಲೆ ಬಿದ್ದು ಜನ ಸಮಾಧಿಯಾಗುತ್ತಿದ್ದೆವು ಎಂದು ಕಳೆದ 43 ದಿನಗಳಿಂದ ಬಾರ್ಜ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೆಂಗರೆಯ ನಿವಾಸಿ ಶೋಭಿತ್ (23) ತಿಳಿಸಿದ್ದಾರೆ. ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ರಾತ್ರಿ 9 ಗಂಟೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆಂಬ ಸುದ್ದಿ ತಿಳಿದು ಒಮ್ಮೆ ಆಘಾತವಾಯಿತು. ಹೆದರಿಕೆಯೂ ಪ್ರಾರಂಭವಾಗಿತ್ತು. ನಮ್ಮ ಜೊತೆಗಿದ್ದ ಪಂಜಾಜ್‌ನ ಕೆಲವು ಕೆಲಸಗಾರರು ತುಂಬಾ ಹೆದರಿಕೊಂಡಿದ್ದರು. ಯಾಕೆಂದರೆ ಅವರಿಗೆ ಸಮುದ್ರದ ಆಳ ಮತ್ತು ಅಲ್ಲಿನ ಬೃಹತ್ ಅಲೆಗಳ ಬಗ್ಗೆ ಅರಿವು ಇರಲಿಲ್ಲ. ಆದರೂ ನಾನು ಅವರಿಗೆ ಧೈಯ ತುಂಬುತ್ತಿದ್ದೆ ಎಂದು ಅವರು ಬಾರ್ಜ್‌ನಲ್ಲಿ ಆತಂಕದಲ್ಲಿ ಒಂದು ರಾತ್ರಿಯನ್ನು ಕಳೆದಿರುವ ಅನುಭವವನ್ನು ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡರು. ಸಚಿವ ಯು.ಟಿ.ಖಾದರ್ ಅವರು ನಿರಂತರ ನನ್ನ ಸಂಪರ್ಕದಲ್ಲಿದ್ದರು. ಕೆಲವು ಅಧಿಕಾರಿಗಳೂ ಸಂಪರ್ಕದಲ್ಲಿದ್ದರು. ಬಾರ್ಜ್‌ನಲ್ಲಿ ಊಟದ ವ್ಯವಸ್ಥೆ ಇತ್ತಾದರೂ, ಮೆಸ್‌ಗೆ ಕೆಳಗೆ ಹೋಗಬೇಕಾಗಿದ್ದರಿಂದ ನಾವು ಹೆದರಿಕೆಯಿಂದ ಮೆಸ್‌ಗೆ ಹೋಗದೆ ಊಟ ಮಾಡದೆ ರಾತ್ರಿಯನ್ನು ಕಳೆದೆವು. ಸರಿಯಾದ ನಿದ್ದೆ ಇಲ್ಲದೆ ಆತಂಕದಲ್ಲೇ ಇದ್ದೆವು ಎಂದು ಶೋಭಿತ್ ತಿಳಿಸಿದರು. ಕೋಸ್ಟ್‌ಗಾರ್ಡ್‌ನವರ ಬಗ್ಗೆ ನಮಗೆ ಅಸಮಾಧಾನ ಇಲ್ಲ. ಅಲ್ಲಿದ್ದ ಬಂಡೆ ಕಲ್ಲುಗಳನ್ನು ದಾಟಿ ಬರುವುದು ಕೂಡ ಅಷ್ಟು ಸುಲಭ ಇರಲಿಲ್ಲ. ಕೋಸ್ಟ್‌ಗಾರ್ಡ್ ನವರು ಏನು ಹೇಳುತ್ತಾರೋ ಅದನ್ನೇ ನಾವು ಪಾಲಿಸಬೇಕಿತ್ತು ಎಂದರು.
Next Story