ಕೇಂದ್ರದ ಅರ್ಥಿಕ ನೀತಿಯಿಂದ ಕಾರ್ಮಿಕರಿಗೆ ಸಂಕಷ್ಟ:ಸೈಯದ್ ಮುಜೀಬ್

ತುಮಕೂರು.ಜೂ.4: ದೇಶದಲ್ಲಿ ನರೇಂದ್ರ ಮೋದಿ ಸರಕಾರದ ದೂರಾಲೋಚನೆಯಿಲ್ಲದ ಆರ್ಥಿಕ ನೀತಿಗಳಿಂದ ಕಾರ್ಮಿಕರು ಕಷ್ಟ ಅನುಭವಿಸುವಂತಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ತಿಳಿಸಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಡಬ್ಲ್ಯೂಎಫ್‌ಐ,ನ 3000 ಸಾವಿರ ಪಿಂಚಣಿಗಾಗಿ, ಮನೆ-ನಿವೇಶನಕ್ಕಾಗಿ,ಸೌಲಭ್ಯಗಳ ತ್ವರಿತ ವಿಲೇವಾರಿಗಾಗಿ ಆಗ್ರಹಿಸಿ ನಗರದ ಗಾಂಧೀನಗರದಲ್ಲಿರುವ ಚನ್ನಪ್ಪ ಭವನ ಜನ ಚಳುವಳಿಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತುಮಕೂರು ತಾಲೂಕು ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,ನೋಟು ಅಮಾನೀಕರಣವಂತು ದುಡಿಯುವ ಜನತೆಯ ಬದುಕುವ ಹಕ್ಕನ್ನೆ ಕಿತ್ತುಕೊಂಡಿದೆ.ಬಂಡವಾಳ ಶಾಹಿಗಳ ಕೈವಶದಲ್ಲಿರುವ ಮಾಧ್ಯಮಗಳು ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿವೆ ಎಂದು ಆರೋಪಿಸಿದರು. ದೇಶದಲ್ಲಿ ಅಸಮಾನತೆಗಳು ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದ್ದು,ದೇಶದ 57 ಜನ ಬಾರಿ ಶ್ರೀಮಂತರ ಆಸ್ತಿಗಳು 87 ಸಾವಿರ ಜನರು ಹೊಂದಿರುವ ಸಂಪತ್ತನ್ನು ಹೊಂದಿದ್ದಾರೆ.ಶ್ರಮ ಜೀವಿಗಳ ದೀಘರ್ ಹೋರಾಟಗಳಿಂದ ಪಡೆದ ಹಕ್ಕುಗಳ ಮೇಲೆ, ಅವರ ಕೆಲಸ ಮತ್ತು ಜೀವನದ ಪರಿಸ್ಥಿತಿಗಳ ಮೇಲೆ ದಾಳಿ ಮಾಡುತ್ತಾ,ತಮ್ಮ ಲಾಭಗಳನ್ನು ರಕ್ಷಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಸ್ವದೇಶಿ ಮತ್ತು ವಿದೇಶಿ ಕಾರ್ಪೊರೇಟ್‌ಗಳಿಗೆ ರಾಷ್ಟ್ರೀಯ ಆಸ್ತಿಗಳನ್ನು ಲೂಟಿ ಮಾಡಲು ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದೆ ಎಂದರು. ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ,ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಂದ ವಂತಿಗೆಯನ್ನು ಮಾತ್ರ ಸಂಗ್ರಹ ಮಾಡುತ್ತಿದ್ದು,ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಶೀಘ್ರವಿಲೇವಾರಿ ಮಾಡಬೇಕು ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಿ ಕಾರ್ಮಿಕರಿಗೆ ನೆರವಾಗಬೇಕು ಎಂದರು. ಪೌರಕಾರ್ಮಿಕರ ಸಂಘದ ನರಸಿಂಹಮೂರ್ತಿ ಮಾತನಾಡಿ,ಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ಮಾತ್ರ ಸಂಘಕಟ್ಟದೆ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ದ ಹೋರಾಟವನ್ನು ನಡೆಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ. ಉಮೇಶ್ ಮಾತನಾಡಿ,ಕಟ್ಟಡ ಕಾರ್ಮಿಕರ ಸಂಘದ ಹಲವು ಹೋರಾಟಗಳ ಫಲವಾಗಿ ಇಂದು ಕಾರ್ಮಿಕರಿಗೆ ಸ್ವಲ್ಪ ಪ್ರಮಾಣದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿದೆ ರಾಜಕೀಯ ಪಕ್ಷಗಳು ಚುನಾವಣೆಗಳು ಹತ್ತಿರ ಬಂದಾಗ ಎಲ್ಲರೂ ನಮ್ಮವರು ಎಂದು ಬಿಂಬಿಸಿ ನಂತರ ಹತ್ತಿರಕ್ಕೂ ಸೇರಿಸಿಕೊಳ್ಳದೆ ಇರುವ ಕಾಲಘಟ್ಟದಲ್ಲಿ ನಾವುಗಳು ಇದ್ದೇವೆ.ಆ ನಿಟ್ಟಿನಲ್ಲಿ ಕಾರ್ಮಿಕರು ಜಾಗ್ರತರಾಗುವ ಮೂಲಕ ಸಂಘವನ್ನು ಬಲಿಷ್ಟವಾಗಿ ಕಟ್ಟಬೇಕು ಎಂದರು. ವೇದಿಕೆಯಲ್ಲಿ ಸಿಐಟಿಯು ಜಿಲ್ಲಾಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ,ರಾಜ್ಯ ಉಪಾಧ್ಯಕ್ಷ ಶ್ರೀಧರ್ ಪಾಪಣ್ಣ,ಸಂಘದ ದೇವಮ್ಮ, ಸರೋಜಮ್ಮ, ಉಪಸ್ಥಿತರಿದ್ದರು.
Next Story





