ನೆಟ್ ವರ್ಕ್ ಸಿಗದೆ ಮರಹತ್ತಿದ ಕೇಂದ್ರ ಸಚಿವ ಅರ್ಜುನ್ ರಾಮ್
ಇದು ಡಿಜಿಟಲ್ ಇಂಡಿಯಾ!

ರಾಜಸ್ಥಾನ, ಜೂ.4: ಒಂದೆಡೆ ಕೇಂದ್ರ ಸರಕಾರ “ಡಿಜಿಟಲ್ ಇಂಡಿಯಾ”ದ ಬಗ್ಗೆ ಮಾತುಗಳನ್ನಾಡುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್, ಕುಡಿಯುವ ನೀರು, ಮೊಬೈಲ್ ನೆಟ್ ವರ್ಕ್ ಗಳಿಲ್ಲದೆ ದೇಶಾದ್ಯಂತದ ಹಳ್ಳಿಗಳ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಸಚಿವರೊಬ್ಬರು ಈ ರೀತಿಯ ಸಮಸ್ಯೆಗೆ ಸಿಲುಕಿ ಮುಜುಗರ ಅನುಭವಿಸುವುದಾದರೆ ಸಾಮಾನ್ಯನ ಪರಿಸ್ಥಿತಿ ಹೇಗಿರಬೇಡ. ಕೇಂದ್ರ ವಿತ್ತ, ಕಾರ್ಪೊರೇಟ್ ವ್ಯವಹಾರ ಸಚಿವ ಅರ್ಜುನ್ ರಾಮ್ ಮೆಘಾವಲ್ ಬಿಕನೇರ್ ಜಿಲ್ಲೆಯಿಂದ 12 ಕಿ.ಮೀ. ದೂರದಲ್ಲಿರುವ ಧೋಲಿಯಾ ಗ್ರಾಮಕ್ಕೆ ರವಿವಾರ ಭೇಟಿ ನೀಡಿದ್ದರು. ಈ ಸಂದರ್ಭ ಅಲ್ಲಿನ ಗ್ರಾಮಸ್ಥರು ತಾವು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಅಧಿಕಾರಿಗಳು ನಮ್ಮ ಮಾತಿಗೆ ಕಿವಿಗೊಡುವುದಿಲ್ಲ ಎಂದು ದೂರಿದರು. ಈ ಸಂದರ್ಭ ಮೆಘಾವಲ್ ಅಧಿಕಾರಿಗಳಿಗೆ ಕರೆ ಮಾಡಿದ್ದು, ನೆಟ್ ವರ್ಕ್ ಸಮಸ್ಯೆಯಿಂದ ಕರೆ ತಲುಪಿರಲಿಲ್ಲ. ಇದಕ್ಕೆ ಪರಿಹಾರ ಸೂಚಿಸಿದ ಗ್ರಾಮಸ್ಥರು ಮರಕ್ಕೆ ಹತ್ತಿದರೆ ನೆಟ್ ವರ್ಕ್ ಸಿಗುತ್ತದೆ, ಆನಂತರ ಮಾತನಾಡಬಹುದು ಎಂದರು. ಇದರಂತೆ ಸಚಿವರಿಗಾಗಿ ಏಣಿಯೊಂದನ್ನು ತರಿಸಲಾಯಿತು. ಏಣಿಯನ್ನು ಮರಕ್ಕೆ ತಾಗಿಸಿದ ಸಚಿವರು ಏಣಿ ಹತ್ತಿ ಅಧಿಕಾರಿಗೆ ಕರೆ ಮಾಡಿದ್ದು, ನೆಟ್ ವರ್ಕ್ ಕೂಡ ಲಭಿಸಿತ್ತು, ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವ ಮೆಘಾವಲ್ ಜನರ ಸಮಸ್ಯೆಗಳ ಬಗ್ಗೆ ತಿಳಿಸಿದರು. ಗ್ರಾಮದ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಗ್ರಾಮದಲ್ಲಿ ಬಿಎಸ್ಸೆನ್ನೆಲ್ ಟವರ್ ಸ್ಥಾಪಿಸಲು 13 ಲಕ್ಷ ರೂ,ಗಳನ್ನು ಇದೇ ಸಂದರ್ಭ ಅವರು ಘೋಷಿಸಿದರು.
Next Story





