ಮುಝಫರ್‌ಪುರ ಹಿಂಸಾಚಾರ: 270 ಜನರ ವಿರುದ್ಧ ಪ್ರಕರಣ ದಾಖಲು

ಮುಝಫರ್‌ಪುರ(ಉ.ಪ್ರ),ಜೂ.4: ಶುಕ್ರವಾರ ಇಲ್ಲಿಯ ಶೇರ್‌ಪುರ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಗ್ರಾಮದ ಮುಖ್ಯಸ್ಥ ಸೇರಿದಂತೆ 270 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಹಿಂಸಾಚಾರದಲ್ಲಿ ಐವರು ಪೊಲೀಸರು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದರು.
‘ಗೋ ಹತ್ಯೆ’ಯ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಗ್ರಾಮದಲ್ಲಿಯ ಕೆಲವು ಮನೆಗಳ ಮೇಲೆ ದಾಳಿ ನಡೆಸಿದಾಗ ಜನರ ಗುಂಪೊಂದು ಅವರ ಮೇಲೆ ಕಲ್ಲುತೂರಾಟ ನಡೆಸಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿತ್ತು.
ದಾಳಿಯ ಸಮಯದಲ್ಲಿ ಪೊಲೀಸರಿಗೆ ಯಾವುದೇ ಸಾಕ್ಷ ದೊರಕದ್ದರಿಂದ ಅವರು ಸಮೀಪದ ಮನೆಗಳಲ್ಲಿ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದರು. ಇದರಿಂದ ಕುಪಿತಗೊಂಡ ಜನರು ಪೊಲೀಸರ ಕ್ರಮವನ್ನು ವಿರೋಧಿಸಿ ಅವರತ್ತ ಕಲ್ಲು ತೂರಾಟ ನಡೆಸಿದ್ದರು.ಎರಡು ಪೊಲಿಸ್ ಬೈಕ್‌ಗಳನ್ನೂ ಗುಂಪು ಸುಟ್ಟುಹಾಕಿತ್ತು.
ತನ್ಮಧ್ಯೆ ಸಂಬಂಧಿಸಿದ ಪೊಲಿಸ್ ಠಾಣೆಯ ಎಸ್‌ಐ ಅನ್ನು ವರ್ಗಾವಣೆಗೊಳಿಸಲಾಗಿದೆ. ಇತರ ಕೆಲವು ಸಿಬ್ಬಂದಿಗಳನ್ನೂ ಎತ್ತಂಗಡಿ ಮಾಡಲಾಗಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸ ಲಾಗಿದೆ.





