ಜನಪದ ಸಾಹಿತ್ಯ ಸದಾ ಜೀವಂತ: ಗೊ.ರು.ಚನ್ನಬಸಪ್ಪ
ಬೆಂಗಳೂರು, ಜೂ. 4: ಜನಪದರು ರಚಿಸಿರುವ ಸಾಹಿತ್ಯ ಯಾವುದೇ ಆಡಂಬರವಿಲ್ಲದೆ ಬದುಕಿನ ಸಹಜತೆಯನ್ನು ಹೊಂದಿರುವುದರಿಂದ, ಅದು ಸದಾ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ. ಗೊ.ರು. ಚನ್ನಬಸಪ್ಪ ಅಭಿಪ್ರಾಯಪಟ್ಟರು. ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಚನ ಜ್ಯೋತಿ ಬಳಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಕಲಾ ಸಂಗಪ್ಪಾ ಹಾರಕುಡೆ ಅವರ ‘ಚಂದ್ರಸಂಗ ಸಿರಿ’ ಪುಸ್ತಕ ಮತ್ತು ‘ಚಂದ್ರಸಂಗ ಸಿರಿಗಾನ’ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಪಂಡಿತರ ಸಾಹಿತ್ಯದಲ್ಲಿ ವಾಸ್ತವಕ್ಕಿಂತ ಬಣ್ಣವೇ ಹೆಚ್ಚಿರುವುದರಿಂದ ಸಣ್ಣ ಮಳೆಗೂ ಆ ಬಣ್ಣ ಕೊಚ್ಚಿ ಹೋಗುತ್ತದೆ. ಆದರೆ ಜೀವನದ ನಿದರ್ಶನವನ್ನು ಇಟ್ಟಕೊಂಡು ಸಹಜವಾಗಿಯೇ ರಚನೆಗೊಂಡಿರುವ ಜಾನಪದ ಸಾಹಿತ್ಯ ಎಂದಿಗೂ ಸತ್ವಯುತವಾಗಿಯೇ ಇರುತ್ತದೆ ಎಂದು ಹೇಳಿದರು. ತತ್ವಪದಕಾರರು ಅತೀ ದೊಡ್ಡ ಆಧ್ಯಾತ್ಮ ಚಿಂತಕರಾಗಿದ್ದರು. ಅವರ ರಚನೆಗಳು ಅಗಾಧ ಚಿಂತನೆಗೆ ಹಚ್ಚುತ್ತಿದ್ದವು. ಹಿಂದೆ ಶರಣರು ಕೂಡ ಲೋಕದ ತಪ್ಪುಗಳನ್ನು ತಮ್ಮ ಮೇಲೆ ಎಳೆದುಕೊಂಡು ವಚನಗಳನ್ನು ರಚಿಸಿದರು. ಇಂತಹ ಸಹಜ ಬರವಣಿಗೆಯೇ ನಿಜವಾದ ಸಾಹಿತ್ಯವಾಗಿದೆ ಎಂದರು. ಹಿರಿಯ ಸಾಹಿತಿ ಡಾ. ಶಿವಾನಂದ ಕುಬಸದ ಮಾತನಾಡಿ, ಮಕ್ಕಳು ವಿದೇಶದಲ್ಲಿದ್ದರೆ ಪಾಲಕರು ಹೆಮ್ಮೆ ಪಡುತ್ತಾರೆ. ಆದರೆ ಕೇವಲ ದುಡಿಮೆಗಾಗಿ ಕುಟುಂಬಗಳು ವಿಭಜನೆಯಾಗುವುದರಲ್ಲಿ ಅರ್ಥವಿಲ್ಲ. ಮಕ್ಕಳು ವಿದೇಶದಲ್ಲಿ ನೆಲೆಸಿ ತಂದೆ, ತಾಯಿಗಳು ವೃದ್ಧಶ್ರಮದಲ್ಲಿದ್ದರೆ ಅದು ಬದುಕು ಎನ್ನಿಸಿಕೊಳ್ಳುವುದಿಲ್ಲ. ಸತಿ-ಪತಿಯರು ಕೂಡಿರುವುದನ್ನೇ ಅವಿಭಕ್ತ ಕುಟುಂಬ ಎನ್ನುವ ಕಾಲ ಬಂದಿರುವುದು ಬೇಸರದ ಸಂಗತಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಂದ್ರಕಲಾ ಸಂಗಪ್ಪ ಹಾರಕುಡೆ ದಂಪತಿಯನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಬಸವ ಸಮಿತಿಯ ಹಿರಿಯ ಉಪಾಧ್ಯಕ್ಷ ಪ್ರಭುದೇವ ಚಿಗಟೇರಿ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮತ್ತಿತರರು ಉಪಸ್ಥಿತರಿದ್ದರು.
Next Story





