ಉದ್ಯಾವರ ಗ್ರಾಪಂ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ

ಉಡುಪಿ, ಜೂ.4: ಉದ್ಯಾವರ ಗ್ರಾಪಂ ವ್ಯಾಪ್ತಿಯ ಪಿತ್ರೋಡಿಯಲ್ಲಿ ಹೊಸ ಮೂರು ಫಿಶ್‌ಮಿಲ್ ಘಟಕಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕಾ ವಲಯವಾಗಿ ಪರಿವರ್ತಿಸುವ ಕುರಿತು ಗ್ರಾಪಂ ಸಾಮಾನ್ಯ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯವನ್ನು ಶನಿವಾರ ಗ್ರಾಮಸ್ಥರಿಂದ ಭಾರೀ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವಾನುಮತದಿಂದ ರದ್ದುಪಡಿಸಲಾಯಿತು. ಮೇ 27ರಂದು ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಪಿತ್ರೋಡಿ ಭಾಗದ 633 ಸೆನ್ಸ್ ವಿಸ್ತೀರ್ಣದ ಮೂರು ಕೃಷಿ ನಿವೇಶನಗಳನ್ನು ಕೈಗಾರಿಕಾ ವಲಯ ವಾಗಿ ಪರಿವರ್ತಿಸುವಂತೆ ಬಂದ ಅರ್ಜಿಯನ್ನು ಪರಿಗಣಿಸಿ ಅದರ ಪರವಾಗಿ ನಿರ್ಣಯ ಮಂಡಿಸಲಾಗಿತ್ತು. ಸಭೆಯಲ್ಲಿದ್ದ 27 ಸದಸ್ಯರ ಪೈಕಿ 11 ಮಂದಿ ಪರವಾಗಿ, 6 ಸದಸ್ಯರು ವಿರೋಧವಾಗಿ ಮತ್ತು 10 ಮಂದಿ ತಟಸ್ಥ ದೋರಣೆ ತಾಳಿದ್ದರು. ಇದರಿಂದ ಕೈಗಾರಿಕಾ ವಲಯ ಪರಿವರ್ತನೆಗೆ ಒಪ್ಪಿಗೆ ಸೂಚಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ನಿರ್ಣಯವನ್ನು ಮರು ಪರಿಶೀಲಿಸಲು ಜೂ.3ರಂದು ಗ್ರಾಪಂ ಸಾಮಾನ್ಯ ಸಭೆ ಕರೆಯಲಾಗಿತ್ತು. ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಅಧ್ಯಕ್ಷತೆ ಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಹೊರಗಡೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಆಡಳಿತದ ವಿರುದ್ದ ರೊಚ್ಚಿಗೆದಿದ್ದ ನಾಗರಿಕರು ಪಂಚಾಯತಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಫಿಶ್‌ಮಿಲ್ ಸ್ಥಾಪನೆಗೆ ಸಹಕರಿ ಸುತ್ತಿರುವ ಕೆಲ ಸದಸ್ಯರ ವಿರುದ್ದ ಘೋಷಣೆ ಕೂಗಿದ ಗ್ರಾಮಸ್ಥರು ನಿರ್ಣಯ ಹಿಂಪಡೆಯುವಂತೆ ಒತ್ತಾಯಿಸಿದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪರಿಸ್ಥಿತಿ ಕೈಮೀರದಂತೆ ತಡೆದರು.
Next Story





