ದೇವಸ್ಥಾನದ ದೇಣಿಗೆ ಪೆಟ್ಟಿಗೆ ಮುಟ್ಟಿದ ಮಾನಸಿಕ ಅಸ್ವಸ್ಥನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಅರ್ಚಕ

ಜೈಪುರ, ಜೂ.4: ದೇವಸ್ಥಾನದ ದೇಣಿಗೆ ಪೆಟ್ಟಿಗೆ ಮುಟ್ಟಿದ್ದಕ್ಕೆ ಹಣ ಕದ್ದಿದ್ದಾನೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥನೋರ್ವನನ್ನು ಮರಕ್ಕೆ ಕಟ್ಟಿಹಾಕಿದ ದೇವಸ್ಥಾನದ ಅರ್ಚಕ ಹಾಗೂ ಮತ್ತೋರ್ವ ದೊಣ್ಣೆಗಳಿಂದ ಹಲ್ಲೆಗೈದು, ಮೆಣಸಿನ ಪುಡಿ ಎರಚಿದ ಘಟನೆ ಇಲ್ಲಿನ ಪಟ್ಟಣದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಹಲ್ಲೆ ನಡೆಸಿರುವವರನ್ನು ದೇವಸ್ಥಾನದ ಅರ್ಚಕ ಉಮೇಶ್ ದಾಸ್ ಹಾಗೂ ಮತ್ತೋರ್ವ ಗಿರಿರಾಜ್ ಎಂದು ಪೊಲೀಸರು ಗುರುತಿಸಿದ್ದಾರೆ. ಯುವಕನನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಒದೆಯುವ ದೃಶ್ಯಗಳೂ ವಿಡಿಯೋದಲ್ಲಿದೆ. “ದೇವಸ್ಥಾನಕ್ಕೆ ಹೋಗಿದ್ದ ಯುವಕ ದೇಣಿಗೆ ಸಂಗ್ರಹಿಸುತ್ತಿದ್ದ ಡಬ್ಬವನ್ನು ಮುಟ್ಟಿದ್ದ. ಇದನ್ನೇ ನೆಪವಾಗಿಸಿಕೊಂಡು ಆತ ಕಳ್ಳ ಎಂದು ಆರೋಪಿಸಿ ಅರ್ಚಕ ಹಾಗೂ ಮತ್ತೋರ್ವ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಯುವಕನ ಮೈಮೇಲಾದ ಗಾಯಗಳಿಗೆ ಮೆಣಸಿನ ಪುಡಿ ಎರಚಿದ್ದಾರೆ” ಎಂದು ಪೊಲೀಸ್ ಅಧಿಕಾರಿ ನಿರಂಜನ್ ಪಾಲ್ ಸಿಂಗ್ ಹೇಳಿದ್ದಾರೆ. ಗಾಯಾಳುವನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ದಾಸ್, ಗಿರಿರಾಜ್ ಹಾಗೂ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story





