ಅಪಘಾತ: ಬೈಕ್ ಸವಾರರಿಗೆ ಗಾಯ
ಅಂಕೋಲಾ, ಜೂ.4: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಗೌರಿಕೇರಿ ಸಮೀಪದಲ್ಲಿ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಜೆ 7 ಗಂಟೆಯ ವೇಳೆೆ ವರದಿಯಾಗಿದೆ.
ತಾಲೂಕಿನ ಬೆಳಿಹೊಂಯ್ಗಿ ಗ್ರಾಮದ ನಿವಾಸಿ ರಾಘವೇಂದ್ರ ರೂವಾ ಹರಿಕಂತ್ರ ಮತ್ತು ಸಹ ಸವಾರ ಪ್ರಭು ತಂಗವೇಲ್ ವಡಿಯಾರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರು ಅಂಕೋಲಾದಿಂದ ಕಾರವಾರಕ್ಕೆ ಬೈಕ್‌ನಲ್ಲಿ ಹೋಗುತ್ತಿರುವ ವೇಳೆಯಲ್ಲಿ ಎದುರಿನಿಂದ ಬಂದ ಲಾರಿಯು ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇವರಲ್ಲಿ ಪ್ರಭು ತಂಗವೇಲ್ ವಡಿಯಾರ್ ಎಂಬವರು ಕಾಲಿನ ಮೂಳೆ ಮುರಿತದೊಂದಿಗೆ ಗಂಭೀರವಾಗಿ ಗಾಯಗೊಂಡಿದ್ದು, ಕಾರವಾರದ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಿಎಸ್ಸೈ ಎಚ್.ಓಂಕಾರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಿಎಸ್ಸೈ ವೀಣಾ ಹೊನ್ನೆ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.





