ಮನೆಯಲ್ಲಿ ಆಹಾರ ಬೆಳೆಸಿ,ಪರಿಸರ ರಕ್ಷಿಸಿ: ಆಹಾರ ತಜ್ಞರು

ಹೊಸದಿಲ್ಲಿ,ಜೂ.4: ಮನೆಯಲ್ಲೇ ಆಹಾರವನ್ನು ಬೆಳೆಸುವುದು ಆರೋಗ್ಯಕರ ಪರಿಸರದತ್ತ ಒಂದು ಹೆಜ್ಜೆಯಾಗುತ್ತದೆ ಎನ್ನುತ್ತಾರೆ ಖ್ಯಾತ ಆಹಾರ ಲೇಖಕಿ ಹಾಗೂ ಪೋಷಕಾಂಶ ತಜ್ಞೆ ಸಂಗೀತಾ ಖನ್ನಾ.
ವಿಶ್ವ ಪರಿಸರ ದಿನದ ಮುನ್ನಾದಿನವಾದ ರವಿವಾರ ಇಲ್ಲಿ ಈ ಸಲಹೆ ನೀಡಿದ ಅವರು, ನಮ್ಮ ವೈಯಕ್ತಿಕ ಆರೋಗ್ಯವು ಭೂಮಿಯ ಆರೋಗ್ಯದೊಂದಿಗೆ ನೇರವಾದ ನಂಟು ಹೊಂದಿದೆ. ನಮ್ಮ ಆಹಾರ ಮೂಲಗಳು ನಿರಂತರವಾಗಿರುವಂತೆ ಮಾಡುವ ಹೊಣೆಗಾರಿಕೆಯನ್ನು ನಾವೇ ವಹಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ನಮ್ಮ ಕೆಲವು ಆಹಾರವನ್ನು ನಾವೇ ಬೆಳೆಸುವುದು ನಮ್ಮ ದೇಹಪೋಷಣೆಗೆ ಮತ್ತು ಇದೇ ವೇಳೆಗೆ ಪರಿಸರವನ್ನು ಸ್ವಚ್ಛಗೊಳಿಸಲು ಒಂದು ಅದ್ಭುತ ವಿಧಾನವಾಗಿದೆ. ನಗರ ಕೃಷಿಯು ವಾಯುಮಾಲಿನ್ಯ ಸಮಸ್ಯೆಗೆ ಒಂದು ಸಿದ್ಧ ಪರಿಹಾರವಾಗಿದೆ. ಯಾವುದೇ ಸಮಸ್ಯೆಯನ್ನು ಆರಂಭದಲ್ಲಿಯೇ ಬಗೆಹರಿಸುವುದು ಮುಖ್ಯ. ನಗರಗಳಲಿ ತ್ಯಾಜ್ಯಗಳ ರಾಶಿಗೆ ಕಾರಣವಾಗುತ್ತಿರುವ ಆಹಾರ ತ್ಯಾಜ್ಯ ಪ್ರಮುಖ ಸಮಸ್ಯೆಯಾಗಿದೆ.
ಪ್ರತಿ ಮನೆಯೂ ಪ್ರತಿದಿನ ಉತ್ಪಾದಿಸುವ ತ್ಯಾಜ್ಯದ ಪ್ರಮಾಣ ನಮಗೇ ನಾಚಿಕೆಯನ್ನುಂಟು ಮಾಡುತ್ತಿದೆ. ಈ ತ್ಯಾಜ್ಯಗಳು ನಗರ ಪ್ರದೇಶಗಳಲ್ಲಿ ರಾಶಿಯಾಗಿ ಬಿದ್ದಿರುತ್ತವೆ ಮತ್ತು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ ಎಂದು ಇಲ್ಲಿ ‘ಮನೆಯಲ್ಲಿ ಬೆಳೆದ ಆಹಾರದ ಮಹತ್ವ ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಖನ್ನಾ ಹೇಳಿದರು.
ಆದರೆ ನಗರದಲ್ಲಿ,ಮನೆಯ ಪರಿಸರದಲ್ಲಿ ತೋಟಗಾರಿಕೆ, ಕೃಷಿ ಹೊಂದಿದ್ದರೆ ತ್ಯಾಜ್ಯವನ್ನು ವಿಂಗಡಿಸಿ ಸಾವಯವ ತ್ಯಾಜ್ಯವನ್ನು ಕಂಪೋಸ್ಟ್ ಗೊಬ್ಬರ ತಯಾರಿಕೆಗೆ ಬಳಸಬಹುದು. ಇದರಿಂದಾಗಿ ಕೆಟ್ಟ ವಾಸನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಜೊತೆಗೆ ಪರಿಸರವನ್ನು ಅಪಾಯಕಾರಿ ಅನಿಲಗಳಿಂದ ಉಳಿಸಬಹುದು ಎಂದು ಅವರು ತಿಳಿಸಿದರು.







