ಅಮ್ಲ, ತಾಹಿರ್ ಸಾಹಸ, ದಕ್ಷಿಣ ಆಫ್ರಿಕಕ್ಕೆ ಗೆಲುವು

ಲಂಡನ್, ಜೂ.4: ಆರಂಭಿಕ ಆಟಗಾರ ಹಾಶಿಮ್ ಅಮ್ಲ ಆಕರ್ಷಕ ಶತಕ ಹಾಗೂ ಸ್ಪಿನ್ನರ್ ಇಮ್ರಾನ್ ತಾಹಿರ್(4-27) ಅಮೋಘ ಬೌಲಿಂಗ್ ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 96 ರನ್ಗಳ ಅಂತರದಿಂದ ಗೆಲುವು ಸಾಧಿಸಿತು. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 300 ರನ್ ಗುರಿ ಪಡೆದಿದ್ದ ಶ್ರೀಲಂಕಾ ಉತ್ತಮ ಆರಂಭವನ್ನು ಪಡೆದಿದ್ದರೂ ಇಮ್ರಾನ್ ತಾಹಿರ್ ಹಾಗೂ ಕ್ರಿಸ್ ಮೊರಿಸ್(2-32) ಶಿಸ್ತುಬದ್ಧ ಬೌಲಿಂಗ್ ಹಾಗೂ ದಕ್ಷಿಣ ಆಫ್ರಿಕ ಆಟಗಾರರ ಬಿಗಿಯಾದ ಫೀಲ್ಡಿಂಗ್ಗೆ ತತ್ತರಿಸಿ 41.3 ಓವರ್ಗಳಲ್ಲಿ 203 ರನ್ಗೆ ಆಲೌಟಾಯಿತು. ಇನಿಂಗ್ಸ್ ಆರಂಭಿಸಿದ್ದ ಡಿಕ್ವೆಲ್ಲಾ(41) ಹಾಗೂ ನಾಯಕ ತರಂಗ(57) ಮೊದಲ ವಿಕೆಟ್ಗೆ 69 ರನ್ ಕಲೆಹಾಕಿ ಉತ್ತಮ ಆರಂಭವನ್ನು ನೀಡಿದ್ದರು. ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ಕುಸಿತ ಕಂಡ ಶ್ರೀಲಂಕಾ 146 ರನ್ಗೆ 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಚೇತರಿಸಿಕೊಳ್ಳಲಿಲ್ಲ. ಲಂಕೆಯ ಪರ ನಾಯಕ ತರಂಗ(57ರನ್, 69 ಎಸೆತ) ಅಗ್ರ ಸ್ಕೋರರ್ ಎನಿಸಿಕೊಂಡರು. ಇದಕ್ಕೆ ಮೊದಲು ಆರಂಭಿಕ ಬ್ಯಾಟ್ಸ್ಮನ್ ಹಾಶಿಮ್ ಅಮ್ಲ ಸಿಡಿಸಿದ್ದ 103 ರನ್(115 ಎಸೆತ, 5 ಬೌಂಡರಿ, 2 ಸಿಕ್ಸರ್) ಸಹಾಯದಿಂದ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ನಷ್ಟಕ್ಕೆ 299 ರನ್ ಗಳಿಸಿತ್ತು. ಅಮ್ಲ ಹಾಗೂ ಎಫ್ಡು ಪ್ಲೆಸಿಸ್(75ರನ್, 70 ಎಸೆತ, 6 ಬೌಂಡರಿ) 2ನೆ ವಿಕೆಟ್ಗೆ 145 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ಅಮ್ಲ-ಪ್ಲೆಸಿಸ್ ಜೋಡಿ ಚಾಂಪಿಯನ್ಸ್ ಟ್ರೋಫಿಯಲ್ಲಿ ದಕ್ಷಿಣ ಫ್ರಿಕ ಪರ ಮೂರನೆ ಶ್ರೇಷ್ಠ ಜೊತೆಯಾಟ ನಡೆಸಿದ್ದಾರೆ. ಸಂಕ್ಷಿಪ್ತ ಸ್ಕೋರ್ ದಕ್ಷಿಣ ಆಫ್ರಿಕ: 50 ಓವರ್ಗಳಲ್ಲಿ 299/6 (ಹಾಶಿಮ್ ಅಮ್ಲ 103, ಪ್ಲೆಸಿಸ್ 75, ಡುಮಿನಿ ಅಜೇಯ 38, ಪ್ರದೀಪ್ 2-54) ಶ್ರೀಲಂಕಾ: 41.3 ಓವರ್ಗಳಲ್ಲಿ 203 ರನ್ಗೆ ಆಲೌಟ್ (ತರಂಗ 57, ಡಿಕ್ವೆಲ್ಲಾ 41, ತಾಹಿರ್ 4-27, ಮೊರಿಸ್ 2-32)
Next Story





