ಸಾಯಿ ಪ್ರಣೀತ್ ಥಾಯ್ಲೆಂಡ್ ಓಪನ್ ಚಾಂಪಿಯನ್

ಬ್ಯಾಂಕಾಕ್, ಜೂ.4: ಭಾರತದ ಉದಯೋನ್ಮುಖ ಆಟಗಾರ ಸಾಯಿ ಪ್ರಣೀತ್ 20,000 ಡಾಲರ್ ಬಹುಮಾನ ಮೊತ್ತದ ಥಾಯ್ಲೆಂಡ್ ಓಪನ್ ಜಿಪಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿ ರವಿವಾರ ನಡೆದ ಸಿಂಗಲ್ಸ್ ಫೈನಲ್ನಲ್ಲಿ 3ನೆ ಶ್ರೇಯಾಂಕದ ಪ್ರಣೀತ್ ಇಂಡೋನೇಷ್ಯಾದ ನಾಲ್ಕನೆ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ ವಿರುದ್ಧ ಒಂದು ಗಂಟೆ ಹಾಗೂ 11 ನಿಮಿಷಗಳ ಕಾಲ ಹಣಾಹಣಿಯಲ್ಲಿ 17-21, 21-18, 21-19 ಗೇಮ್ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಜಯಿಸಿರುವ ಪ್ರಣೀತ್ ಇದೀಗ ಸತತ ಎರಡನೆ ಪ್ರಶಸ್ತಿಯನ್ನು ಗೆದ್ದುಕೊಂಡರು. ಜನವರಿಯಲ್ಲಿ ಹೈದರಾಬಾದ್ನಲ್ಲಿ ನಡೆದಿದ್ದ ಸೈಯದ್ ಮೋದಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದ ವಿಶ್ವದ ನಂ.24ನೆ ಆಟಗಾರ ಪ್ರಣೀತ್ ರನ್ನರ್-ಅಪ್ಗೆ ತೃಪ್ತಿಪಟ್ಟುಕೊಂಡಿದ್ದರು. ಪ್ರಣೀತ್ ಮೊದಲ ಗೇಮ್ನ್ನು 17-21 ರಿಂದ ಸೋತು ಕಳಪೆ ಆರಂಭ ಪಡೆದಿತ್ತು. ಆನಂತರ ಸತತ ಎರಡು ಪಂದ್ಯಗಳನ್ನು 21-18, 21-19 ಅಂತರದಿಂದ ರೋಚಕವಾಗಿ ಗೆದ್ದುಕೊಂಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ‘‘ಇದೊಂದು ಕಠಿಣ ಪಂದ್ಯವಾಗಿತ್ತು. ನಾನು ನಿಧಾನವಾಗಿ ಲಯ ಕಂಡುಕೊಂಡೆ. ಪಂದ್ಯದಲ್ಲಿ ಜಯ ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ನನಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆ’’ ಎಂದು ಪಂದ್ಯದ ಬಳಿಕ ಪ್ರಣೀತ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪುರುಷರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ ಪನ್ನವಿಟ್ ಥಾಂಗ್ನುಯಮ್ರನ್ನು 21-11, 21-15 ನೇರ ಗೇಮ್ಗಳಿಂದ ಸುಲಭವಾಗಿ ಮಣಿಸಿದ್ದ ಪ್ರಣೀತ್ ಫೈನಲ್ಗೆ ಲಗ್ಗೆ ಇಟ್ಟಿದ್ದರು.
Next Story





