ಆಟಗಾರರ ಸುರಕ್ಷತೆ ಹಾಗೂ ಭದ್ರತೆ ನಮ್ಮ ಮೊದಲ ಆದ್ಯತೆ: ಐಸಿಸಿ
ಲಂಡನ್, ಜೂ.4: ಲಂಡನ್ನಲ್ಲಿ ಶನಿವಾರ ನಡೆದ ಉಗ್ರರ ಅಟ್ಟಹಾಸಕ್ಕೆ ಏಳು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಐಸಿಸಿ ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಹಾಗೂ ಮುಂಬರುವ ಮಹಿಳೆಯರ ವಿಶ್ವಕಪ್ನಲ್ಲಿ ಆಟಗಾರರ ಸುರಕ್ಷತೆಯು ತನ್ನ ಮೊದಲ ಆದ್ಯತೆಯಾಗಿದೆ ಎಂದು ಐಸಿಸಿ ಹೇಳಿದೆ. ಎಲ್ಲ ಸ್ಟೇಡಿಯಂಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗುವುದು. ಬಾಂಬ್ ಸ್ಪೋಟದಿಂದ ಮೃತಪಟ್ಟವರಿಗೆ ವೌನ ಪ್ರಾರ್ಥನೆ ನಡೆಸಲಾಗುವುದು ಎಂದು ಐಸಿಸಿ ತಿಳಿಸಿದೆ. ಕಳೆದ ರಾತ್ರಿ ಲಂಡನ್ನಲ್ಲಿ ನಡೆದ ಘಟನೆಯಿಂದ ಎಲ್ಲರೂ ಬಾಧಿತರಾಗಿದ್ದಾರೆ. ಐಸಿಸಿ ಹಾಗೂ ಇಸಿಬಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಗಳು ಸುಗಮವಾಗಿ ಸಾಗಲು ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ. ಕಳೆದ ರಾತ್ರಿಯ ಘಟನೆಯ ಬಳಿಕ ತಂಡ ವಾಸ್ತವ್ಯದ ಹೊಟೇಲ್ಗಳಿಗೆ ಭಾರೀ ಭದ್ರತೆ ನಿಯೋಜಿಸಲಾಗಿದೆ. ಭಾರತ-ಪಾಕ್ ಪಂದ್ಯಕ್ಕೆ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ನಿಯಮದ ಪ್ರಕಾರ ನಮ್ಮ ಭದ್ರತಾ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
Next Story





