ಭಾರತ-ಪಾಕ್ ಪಂದ್ಯದ ಬಳಿಕ ಜೆಎನ್‌ಯುದಲ್ಲಿ ಇರಾನಿ ವಿದ್ಯಾರ್ಥಿಗೆ ಥಳಿತ
ದೂರಿನ ಬಗ್ಗೆ ಪೊಲೀಸರಿಂದ ತನಿಖೆ

ಹೊಸದಿಲ್ಲಿ,ಜೂ.5: ರವಿವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದರಿಂದ ಥಳಿತಕ್ಕೊಳಗಾಗಿದ್ದಾನೆ ಎನ್ನಲಾಗಿರುವ ಇರಾನಿ ವಿದ್ಯಾರ್ಥಿಯೋರ್ವನ ದೂರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೆಎನ್‌ಯು ಮುಖ್ಯಸ್ಥರಿಗೆ ಈ ವಿದ್ಯಾರ್ಥಿ ಸಲ್ಲಿಸಿರುವ ದೂರಿನ ಪ್ರತಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆಯಾದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಆತ ನಿರಾಕರಿಸಿದ್ದಾನೆ. ತಾವು ಜೆಎನ್‌ಯು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇರಾನಿ ವಿದ್ಯಾರ್ಥಿ ತನ್ನ ಜೀವಕ್ಕೆ ಹೆದರಿಕೊಂಡಿರುವುದರಿಂದ ಪ್ರಕರಣವನ್ನು ಮುಂದುವರಿಸಲು ಬಯಸುತ್ತಿಲ್ಲ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹಿತ್ ಪಾಂಡೆ ತಿಳಿಸಿದರು.
ರವಿವಾರ ರಾತ್ರಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗೆದ್ದ ಬಳಿಕ ಈ ಘಟನೆ ನಡೆದಿತ್ತೆನ್ನಲಾಗಿದೆ. ಇರಾನಿ ವಿದ್ಯಾರ್ಥಿಯಿಂದ ಆರೋಪಕ್ಕೊಳಗಾಗಿರುವ ಎಬಿವಿಪಿ ವಿದ್ಯಾರ್ಥಿ ನಾಯಕ ಸೌರಭ್ ಶರ್ಮಾ, ವಾಗ್ವಾದ ನಡೆದಿದ್ದನ್ನು ದೃಢಪಡಿಸಿದ್ದಾರೆ. ಆದರೆ ಇರಾನಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಸಣ್ಣ ವಿಷಯವನ್ನೇ ದೊಡ್ಡದು ಮಾಡಲಾಗುತ್ತಿದೆ. ಭಾರತದ ಗೆಲುವನ್ನು ನಾವು ಆಚರಿಸುತ್ತಿದ್ದಾಗ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದಿದ್ದ ಇರಾನಿ ವಿದ್ಯಾರ್ಥಿ ನಮ್ಮ ಸಂಭ್ರಮಾಚರಣೆಯನ್ನು ಪ್ರಶ್ನಿಸಿದ್ದ, ಅಲ್ಲದೆ ಅನುಚಿತ ಶಬ್ದಗಳನ್ನೂ ಬಳಸಿದ್ದ. ನಿನಗೇನಾದರೂ ಸಮಸ್ಯೆಯಿದ್ದರೆ ನಿನ್ನ ಕೋಣೆಗೆ ವಾಪಸಾಗು ಎಂದಷ್ಟೇ ನಾವು ಹೇಳಿದ್ದೆವು. ಆತನ ವಿರುದ್ಧ ಬೆರಳನ್ನೂ ಎತ್ತಿರಲಿಲ್ಲ ಎಂದು ಶರ್ಮಾ ಹೇಳಿಕೊಂಡರು.
ತಾನು ಹಾಸ್ಟೆಲ್ ಎದುರಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ಕಾರಿಡಾರ್‌ನ ಹೊರಗೆ ಕೆಲವು ವಿದ್ಯಾರ್ಥಿಗಳು ಪಟಾಕಿ ಸಿಡಿಸುತ್ತಿದ್ದರು. ಭದ್ರತಾ ಸಿಬ್ಬಂದಿಯೋರ್ವ ಅದನ್ನು ಆಕ್ಷೇಪಿಸಿದಾಗ ಅವರು ಆತನೊಂದಿಗೇ ಜಗಳಕ್ಕೆ ಇಳಿದಿದ್ದರು. ಸುಮ್ಮನೆ ನಿಂತಿದ್ದ ತನ್ನೊಂದಿಗೂ ಅವರು ವಾಗ್ವಾದಕ್ಕೆ ಇಳಿದಿದ್ದು, ತನ್ನ ಮೇಲೆ ಹಲ್ಲೆ ನಡೆಸಿದ್ದರು. ಆ ಗುಂಪಿನಲ್ಲಿ ಹತ್ತು ಜನರಿದ್ದರು ಎಂದು ಇರಾನಿ ವಿದ್ಯಾರ್ಥಿ ತನ್ನ ದೂರಿನಲ್ಲಿ ತಿಳಿಸಿದ್ದಾನೆ.
ಘಟನೆ ನಡೆದಿದ್ದು ಹೌದು, ಆದರೆ ಪ್ರಕರಣವನ್ನು ಮುಂದುವರಿಸಲು ಇರಾನಿ ವಿದ್ಯಾರ್ಥಿ ಸಿದ್ಧನಿಲ್ಲ. ಆತ ಹೆದರಿಕೊಂಡಿದ್ದಾನೆ ಎಂದು ಪಾಂಡೆ ಸುದ್ದಿಸಂಸ್ಥೆಗೆ ತಿಳಿಸಿದರು.







