ರಮಝಾನ್ ದಿನಗಳಲ್ಲಿ ತಿಂಡಿ, ಊಟ ನೀಡುತ್ತಿದ್ದ ನೆರೆಮನೆಯ ತಾಯಿ
ನಾನು ಕಂಡಂತೆ ರಮಝಾನ್

"1960ರ ದಿನಗಳವು. ಅಮ್ಮ ಆವಾಗ ವಿಟ್ಲ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲೆಯ ಹಿಂಬದಿಯ ಮನೆಯಲ್ಲಿ ನಮ್ಮ ವಾಸ. ಅಪ್ಪ ಹುಟ್ಟು ಕಲಾವಿದ. ಗಣಪತಿ, ಶಾರದಾ ದೇವಿಯ ವಿಗ್ರಹಗಳನ್ನು ಮಣ್ಣಿನಿಂದ ಅತ್ಯಂತ ಶೃದ್ಧೆಯಿಂದ ನಿರ್ಮಿಸುತ್ತಿದ್ದರು. ಅಮ್ಮನ ಶಿಸ್ತು, ಅಪ್ಪನ ಹಾರೈಕೆ, ಒಡಹುಟ್ಟಿದ ನಾಲ್ವರು ಹೆಣ್ಣು ಮಕ್ಕಳ ಪ್ರೀತಿಯ ನಡುವೆ ನಾನು ಬೆಳೆದೆ.
ಆಗಿನ್ನೂ ಟಿ.ವಿ. ಮನೆಗಳಿಗೆ ಕಾಲಿಟ್ಟಿರಲಿಲ್ಲ. ನಮ್ಮ ಮನೆಯಲ್ಲಿ ಗ್ರಾಮೋಫೋನ್ ಇತ್ತು. ಯಾವಾಗಲೂ ಸಂಜೆ ಅಮ್ಮ ಅದನ್ನು ಆನ್ ಮಾಡಿ ಅದರಲ್ಲಿ ಬರುತ್ತಿದ್ದ ಹಾಡುಗಳನ್ನು ಕೇಳಿಸುತ್ತಿದ್ದರು. ಗ್ರಾಮೋಫೋನ್ ನ ಹಾಡನ್ನು ಕೇಳಲು ನೆರೆಹೊರೆಯ ಮಕ್ಕಳು ಸೇರುತ್ತಿದ್ದರು. ನನ್ನ ಬಾಲ್ಯದಲ್ಲಿ ಹಾದುಹೋದ ರಮಝಾನ್ ಸಿಹಿದಿನಗಳು ನೆನಪಾಗುವುದು ಈ ಗ್ರಾಮೋಫೋನ್ ಮತ್ತು ಅಪ್ಪ ಶ್ರದ್ಧೆಯಿಂದ ಕೆತ್ತುತ್ತಿದ್ದ ಗಣಪತಿ, ಶಾರದಾ ದೇವಿ ವಿಗ್ರಹದಿಂದ.
ರಮಝಾನ್ ತಿಂಗಳು ಬಂತೆಂದರೆ ನನಗೆ ಎಲ್ಲಿಲ್ಲದ ಖುಷಿ. ನನ್ನ ಪಾಲಿಗೆ ಅದೊಂದು ಘಮಘಮಿಸುವ ತಿನಿಸು ಕೊಡುವ ತಿಂಗಳು. ಹಾಗಂತ ನಾನು ಉಪವಾಸ ಹಿಡಿದವನಲ್ಲ. ಉಪವಾಸದ ತೀವ್ರತೆ, ಶ್ರದ್ಧೆಯ ಬಗ್ಗೆ ಅಮ್ಮನಿಂದ ಕಲಿತುಕೊಂಡಿದ್ದೆ. ಅಪಾರ ದೈವ ಭಕ್ತೆಯಾಗಿದ್ದ ಆಕೆ, ದೇವರಿಗೆ ಹರಕೆ ಸಲ್ಲಿಸಲು ಆಗಾಗ ಉಪವಾಸ ಆಚರಿಸುತ್ತಿದ್ದರು. ಆವಾಗ ಆಕೆ ಹೇಳುತ್ತಿದ್ದ ಮಾತುಗಳು ಇನ್ನೂ ನೆನಪಿದೆ. "ಉಪವಾಸ ಎನ್ನುವುದು ಕೇವಲ ದೇಹದಂಡನೆ ಮಾತ್ರವಲ್ಲ. ಎಲ್ಲ ವಿಧದ ಮೂಲಕ ನಮ್ಮ ಶರೀರದ ಇಂದ್ರಿಯಗಳನ್ನು ನಿಯಂತ್ರಿಸುತ್ತಾ, ಸತ್ಯ ಧರ್ಮಕ್ಕೆ ನಮ್ಮನ್ನು ನಾವು ಪ್ರೇರೇಪಿಸಿಕೊಳ್ಳುವುದು" ಎಂದೆಲ್ಲಾ ಉಪದೇಶಿಸುತ್ತಿದ್ದರು. ಆದರೆ ಸಣ್ಣ ಪ್ರಾಯದ ಹುಡುಗಾಟಕ್ಕೆ ಅವೆಲ್ಲ ಅರ್ಥವಾದೀತು ಹೇಗೆ? ನಾವೆಲ್ಲ ಒಟ್ಟಿಗೆ ಕುಳಿತು ಮಣ್ಣಿನ ವಿಗ್ರಹ ಬಿಡಿಸುತ್ತಿದ್ದ ಅಪ್ಪನಿಗೆ ಸಹಾಯ ಮಾಡುವುದು, ಗ್ರಾಮೋಪೋನ್ ಹಾಡುಗಳನ್ನು ಆಲಿಸುವುದು, ಒಂದಷ್ಟು ತುಂಟಾಟ, ಮಾತು, ಗೇಲಿ, ನಗು, ಅಳು... ಇವು ಮಾತ್ರ ನನ್ನ ಬಾಲ್ಯದ ಬದುಕಿಗೆ "ರಮಝಾನ್ ದಿನಗಳು".
ರಮಝಾನ್ ಸಮಯದಲ್ಲಿ ನಮ್ಮ ನೆರೆಮನೆಯ ತಾಯಿಯೊಬ್ಬಳು ನನಗೆ ತಿಂಡಿ, ಪಾನಕ, ಊಟ ಬಡಿಸುತ್ತಿದ್ದಳು. ಮುಸ್ಸಂಜೆಯ ಹೊತ್ತಿನಲ್ಲಿ ಮಸೀದಿಯಲ್ಲಿ ಆಝಾನ್ ಕೇಳಿಸುವುದೇ ತಡ, ನಾವೆಲ್ಲ ಅವರ ಮನೆಯಲ್ಲಿ ಹಾಜರಾಗುತ್ತಿದ್ದೆವು. ಅವರ ಮನೆಯಲ್ಲಿ ಉಂಡು, ತಿಂದು ನಿದ್ದೆ ಮಾಡುತ್ತಿದ್ದ ದಿನಗಳೆಷ್ಟೋ?. ಆಕೆಯನ್ನು ನನ್ನ ಅಮ್ಮನಷ್ಟೇ ಪ್ರೀತಿಯಿಂದ ಗೌರವಿಸುತ್ತಿದ್ದೆ. ಆ ಮನೆಯ ಹೆಣ್ಣು ಮಕ್ಕಳೆಲ್ಲಾ ನನಗೆ ಅಕ್ಕ, ತಂಗಿಯರಂತೆ ಇದ್ದರು. ನಮ್ಮ ನಡುವೆ ಜಾತಿ, ಗಂಡು-ಹೆಣ್ಣೆಂಬ ಪರದೆಯೇ ಇರಲಿಲ್ಲ.
ಈಗ ನನ್ನ ದೃಷ್ಟಿ, ಚಿಂತನಾ ಲಹರಿ ಬದಲಾಗುತ್ತಿದೆ. ಕಳೆದ 50 ದಶಕಗಳಿಂದ ಅವೆಷ್ಟೋ ರಮಝಾನ್ ದಿನಗಳನ್ನು ನೋಡಿದ್ದೇನೋ ಗೊತ್ತಿಲ್ಲ. ಓರಗೆಯ ಸ್ನೇಹಿತರ ಮನೆಗೆ ಹೋಗಿ ಬಿರಿಯಾನಿ ತಿಂದಿದ್ದೇನೆ. ಅವರೊಂದಿಗೆ ಮಸೀದಿ, ದರ್ಗಾಗಳಿಗೆ ತಿರುಗಾಡಿದ್ದೇನೆ. ಗಣ್ಯರೊಂದಿಗೆ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದೇನೆ. ರಮಝಾನ್ ದಿನಗಳ ಸತ್ಯ ಶೋಧನೆಯ ಹುಡುಕಾಟದ ನಡುವೆಯೂ ಬಾಲ್ಯ ತಂದು ಕೊಟ್ಟ ಪವಿತ್ರ ರಮಝಾನ್ ಕಾಣೆಯಾಗುತ್ತಿದೆಯೇ ಎನ್ನುವ ಆತಂಕ ಕಾಡುತ್ತಿದೆ".

- ಮಂಜು ವಿಟ್ಲ







