ಮಂಗಳೂರು ವಿವಿ ಆಡಳಿತ ಸೌಧದ ಎದುರು ಕಾರ್ಮಿಕರ ಧರಣಿ

ಮಂಗಳೂರು, ಜೂ.5: ಕಳೆದ ವಾರವಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದ ಕಾರ್ಮಿಕರು ಅಧಿಕಾರಿಗಳ ಹುಸಿ ಭರವಸೆಯಿಂದ ಮನನೊಂದು ಸೋಮವಾರದಿಂದ ಮತ್ತೆ ಧರಣಿ ನಡೆಸಿ ಗಮನ ಸೆಳೆದಿದ್ದಾರೆ.
ಕೆನಾನ್ ಎಂಬ ಗುತ್ತಿಗೆ ಸಂಸ್ಥೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮೂರು ತಿಂಗಳಿಂದ ವೇತನ ಪಾವತಿಯಾಗಿರಲಿಲ್ಲ. ಎರಡು ವರ್ಷಗಳಿಂದ ಕಾರ್ಮಿಕರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಇಎಸ್‌ಐ, ಪಿಎಫ್ ಕೂಡ ಸಿಕ್ಕಿಲ್ಲ. ಹಲವು ಬಾರಿ ವೇತನ ಏರಿಕೆಯಾದರೂ ಕಾರ್ಮಿಕರಿಗೆ ಅದರ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಅನ್ಯಾಯದ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕಾರ್ಮಿಕರು ಮಂಗಳೂರು ವಿಶ್ವವಿದ್ಯಾನಿಲಯದ ಆಡಳತ ಸೌಧದ ಮುಂದೆ ಮೆ 30ರಂದು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಅದು ಈಡೇರಿರಲಿಲ್ಲ. ಆ ಹಿನ್ನಲೆಯಲ್ಲಿ ಸೋಮವಾರ ಕಾರ್ಮಿಕರು ಧರಣಿ ಆರಂಭಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಧರಣಿ ಆರಂಭಗೊಂಡಿದ್ದು, ಕಾರ್ಮಿಕರು ಕುಲಸಚಿವರ ವಿರುದ್ಧ ಧಿಕ್ಕಾರ ಕೂಗಿದರು. 12:15ರ ವೇಳೆಗೆ ಮಾತುಕತೆಗೆ ಬರುವಂತೆ ಮುಖಂಡರಿಗೆ ಕುಲಸಚಿವರ ಕಚೇರಿಯಿಂದ ಆಹ್ವಾನ ಬಂತು. 2 ಗಂಟೆ ಹೊತ್ತಿಗೆ ಕೊಣಾಜೆ ಠಾಣಾಧಿಕಾರಿ ಕರೆ ಮಾಡಿ ಈ ವಿಷಯ ಪ್ರಸ್ತಾಪಿಸಿದರು. ಮೂರು ಬಾರಿ ಕುಲಸಚಿವರ ಬಳಿ ಮಾತುಕತೆ ನಡೆಸಿದ್ದು, ಇನ್ನು ಈ ವಿಚಾರದಲ್ಲಿ ಮಾತುಕತೆಯಿಲ್ಲ ಎಂದು ಧರಣಿಯ ನೇತೃತ್ವ ವಹಿಸಿದವರು ಸ್ಪಷ್ಟಪಡಡಿಸಿದರು.
ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಶೋಕ್ ಕೊಂಚಾಡಿ ಮಾತನಾಡಿ ದೇಶದ ಪ್ರತಿಷ್ಠಿತ ವಿವಿಗಳ ಪಟ್ಟಿಯಲ್ಲಿ ಮಂಗಳೂರು ವಿವಿ 19ನೇ ಸ್ಥಾನದಲ್ಲಿದೆ. ಆದರೆ ಕಾರ್ಮಿಕರನ್ನು ಶೋಷಣೆ ಮಾಡುವಲ್ಲಿ ಮಂಗಳೂರು ವಿವಿ ನಂ-1ನೆ ಸ್ಥಾನದಲ್ಲಿದೆ. ಇದುವರೆಗೆ ಕಾರ್ಮಿಕರ ಶೋಷಣೆ ಮಾಡಿರುವ ವಿವಿ ಹೊರಜಿಲ್ಲೆಗಳಿಂದ ಕಾರ್ಮಿಕರನ್ನು ತಂದು ಇಲ್ಲಿನವರನ್ನು ತೆಗೆಯುವ ಹುನ್ನಾರ ನಡೆಸಿದೆ ಎಂದು ಆಪಾದಿಸಿದರು.
ದಲಿತ ಸಂಘಟನೆಯ ಮುಖಂಡ ರಮೇಶ್ ಕೋಟ್ಯಾನ್ ಮಾತನಾಡಿ, ವಿವಿ ನಿರ್ಲಕ್ಷ್ಯಕ್ಕೆ ಕಾರ್ಮಿಕರ ಪ್ರತಿಭಟನೆ ಮುಂದುವರಿಯುವ ಲಕ್ಷಣ ಗೋಚರಿಸುತ್ತಿವೆ, ತಕ್ಷಣ ಸಮಸ್ಯೆ ಬಗೆಹರಿಸದಿದ್ದಲ್ಲಿ, ಕುಲಸಚಿವರ ವಿರುದ್ದ ಪ್ರಕರಣ ದಾಖಲಿಸುವ ಜೊತೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಸಿಐಟಿಯು ವಲಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ನಿರ್ಮಲ್ ಕುಮಾರ್, ಯಶೋಧಾ ಹೊಸಬೆಟ್ಟು, ಪ್ರಕಾಶ್ ವಿ.ಎನ್, ಸುಭಾಷ್ ಕಾವೂರು ಮತ್ತಿತರರು ಪಾಲ್ಗೊಂಡಿದ್ದರು.







