ವಿದ್ಯಾರ್ಥಿ ವೇತನ, ಉಚಿತ ನೋಟ್ ಪುಸ್ತಕ ವಿತರಣೆ

ಚಿಕ್ಕಮಗಳೂರು, ಜೂ.5: ಹಿಂದುಳಿದ ವರ್ಗಗಳ ಮಕ್ಕಳು ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಡಿ.ಎಲ್.ಶಂಕರ್‌ನಾಥ್ ಕಿವಿಮಾತು ಹೇಳಿದ್ದಾರೆ.
ಅವರು ನಗರದ ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ನೀಡಲಾದ ವಿದ್ಯಾರ್ಥಿ ವೇತನ ಮತ್ತು ಉಚಿತ ನೋಟ್ ಪುಸ್ತಕಗಳನ್ನು ಸಮುದಾಯದ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಹಲವು ವರ್ಷಗಳ ಹಿಂದೆ ಬಡವರ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ವಿದ್ಯಾಭ್ಯಾಸಕ್ಕಾಗಿ ಮೈಲಿಗಟ್ಟಲೆ ನಡೆದು ಅವರಿವರ ಮನೆಯಲ್ಲಿ ವಾರಾನ್ನದ ಊಟ ಮಾಡಿ ಓದಬೇಕಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ, ಸರ್ಕಾರಗಳು ಶಿಕ್ಷಣಕ್ಕಾಗಿ ಕೋಟ್ಯಾಂತರ ರೂ. ವ್ಯಯಿಸಿ ಅನೇಕ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಉಚಿತವಾಗಿ ಶಿಕ್ಷಣವನ್ನೂ ನೀಡುತ್ತಿವೆ ಎಂದರು.
ಸಂಘ ಸಂಸ್ಥೆಗಳೂ ಸಹ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತುಗಳನ್ನು ನೀಡುತ್ತಿವೆ ಎಂದ ಅವರು ಹಿಂದುಳಿದ ವರ್ಗಗಳ ಬಡ ಮಕ್ಕಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಸಲಹೆ ಮಾಡಿದರು.
ಸಮುದಾಯದ ನೂರು ಬಡ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಉಚಿತ ನೋಟ್ ಪುಸ್ತಕಗಳನ್ನು, ಪ್ರತಿಭಾವಂತ 75 ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕೆ.ಹೆಚ್.ದಿವ್ಯಾ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ದೀಕ್ಷಾ ಕೃಷ್ಣಾ ಕಾಂಚನ್ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸಂಘದ ಮಾಜಿ ಅಧ್ಯಕ್ಷ ಕೆ.ರಾಮಣ್ಣ, ಖಜಾಂಚಿ ಕೆ.ಸತ್ಯ, ಬಿ.ನಾರಾಯಣ್ ಉಪಸ್ಥಿತರಿದ್ದರು, ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಉಪಾಧ್ಯಕ್ಷ ಕೃಷ್ಣಾಕಾಂಚನ್ ಸ್ವಾಗತಿಸಿದರು, ಕೆ.ಎಸ್.ಸಂತೋಷ್ ವಂದಿಸಿದರು.







