ರಮಝಾನ್ ನಲ್ಲಿ ದಾನ, ಧರ್ಮ ಮಾಡಿದರೆ ಇಹ, ಪರದಲ್ಲೂ ವಿಜಯಿ: ಯಾಕೂಬ್ ಧಾರಿಮಿ

ಮೂಡಿಗೆರೆ, ಜೂ.5: ರಂಜಾನ್ ತಿಂಗಳಲ್ಲಿ ದಾನ,ಧರ್ಮ ನೀಡಿದರೆ ಇಹ ಹಾಗೂ ಪರದಲ್ಲೂ ವಿಜಯಿಗಳಾಗಬಹುದು ಎಂದು ಮೂಡಿಗೆರೆ ಬದ್ರಿಯಾ ಮಸೀದಿ ಖತೀಬ್ ಯಾಕೂಬ್ ದಾರಿಮಿ ಹೇಳಿದರು.
ಅವರು ಸೋಮವಾರ ತಾಲೂಕ್ ರೇಂಜ್ ಜಂಇಯತುಲ್ ಮುಅಲ್ಲಿಮೀನ್ ಸಮಿತಿ ವತಿಯಿಂದ ಬದ್ರಿಯಾ ಮಸೀದಿಯಲ್ಲಿ ಏರ್ಪಡಿಸಿದ್ದ 33 ಮಸೀದಿಗಳ ಧರ್ಮಗುರುಗಳಿಗೆ ಉಚಿತ ವಸ್ತ್ರ ವಿತರಿಸಿ ಮಾತನಾಡಿದರು.
ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ಅನ್ನ, ಆಹಾರ, ಧವಸ ಧಾನ್ಯ, ವಸ್ತ್ರ, ರಕ್ತ ಇವುಗಳನ್ನು ಅರ್ಹರಿಗಷ್ಟೇ ದಾನ ಮಾಡಬೇಕು. ಹಸಿದವನಿಗೆ ಒಂದು ಹೊತ್ತಿನ ಊಟ ನೀಡುವ ಮೂಲಕ ಆತನ ಹಸಿವು ನೀಗಿಸಿದರೆ ಜೀವನದಲ್ಲಿನ ಅತ್ಯಂತ ಗಂಭೀರ ಪಾಪಗಳ ವಿಮೋಚನೆಯಾಗುವುದು ಎಂದು ತಿಳಿಸಿದರು.
ಧರ್ಮಗಳ ಬಗ್ಗೆ ಧಾರ್ಮಿಕತೆಗಳ ಬಗ್ಗೆ ಪಾಠ ಮಾಡುವ ಧರ್ಮ ಗುರುಗಳಿಗೆ ದಾನ ಮಾಡಿದರೆ ಅದರ ಪಲಿತಾಂಶವೂ ಕೂಡ ಕಷ್ಟ ಕಾಲದಲ್ಲಿ ರಕ್ಷಣೆಗೆ ನಿಲ್ಲಲಿದೆ ಎಂದು ನುಡಿದರು.
ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಸಮಿತಿ ಕಾರ್ಯದರ್ಶಿ ಸುಲೈಮಾನ್ ಮುಸ್ಲಿಯಾರ್ ಮಾತನಾಡಿ, ಆಸ್ತಿ, ಅಂತಸ್ತು, ಶ್ರೀಮಂತಿಕೆ ಇದ್ದ ಮಾತ್ರಕ್ಕೆ ದಾನ ಧರ್ಮ ನೀಡಲು ಸಾದ್ಯವಾಗದು. ದಾನ ಧರ್ಮ ನೀಡುವ ಕೈಗಳು ಬಡವರ್ಗದವರಿಗೂ ಇರುತ್ತದೆ. ದಾನ ಮಾಡುವವರು ಸಮಾಜದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಹೃದಯ ಶ್ರೀಮಂತಿಕೆಯುಳ್ಳವರ ಸಾಲಿಗೆ ಸೇರ್ಪಡೆಗೊಳ್ಳಳಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಎ.ಹಮ್ಮಬ್ಬ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಬ್ಯಾರೀ ಸಾಹಿತ್ಯ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್, ಧರ್ಮ ಗುರುಗಳಾದ ರಫೀಕ್ ಫೈಝಿ, ಸಿರಾಜುದ್ದೀನ್ ಮುಸ್ಲಿಯಾರ್, ಮಸೀದಿ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಶರೀಫ್, ಇಬ್ರಾಹೀಂ ಯಾದ್‌ಗಾರ್, ಹಾಜಬ್ಬ, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಎ.ಸಿ.ಅಯ್ಯೂಬ್ ಹಾಜಿ ಮತ್ತಿತರರಿದ್ದರು.







