ಮಂಗಳೂರು ನಗರದಲ್ಲಿ ಉತ್ತಮ ಮಳೆ: ಕಾಂಕ್ರೀಟ್ ರಸ್ತೆಗಳಲ್ಲೇ ಹರಿದ ನೀರು!

ಮಂಗಳೂರು, ಜೂ. 5: ಮುಂಗಾರು ಮಳೆ ನಿಧಾನವಾಗಿ ಆರಂಭಗೊಂಡಿರುವಂತೆಯೇ ಮೊದಲ ಮಳೆಗೆ ನಗರದ ಹಲವೆಡೆ ಇಂದು ಪ್ರಮುಖ ಹಾಗೂ ಒಳ ಕಾಂಕ್ರೀಟ್ ರಸ್ತೆಯ ಮೇಲೆಯೇ ಮಳೆ ನೀರು ಧಾರಾಕಾರವಾಗಿ ಹರಿದು ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಇಂದು ಮಧ್ಯಾಹ್ನದಿಂದ ಸುರಿದ ಗುಡುಗು ಸಹಿತ ಸುರಿದ ಮಳೆಗೆ ನಗರದ ಹಂಪನ್‌ಕಟ್ಟೆ, ಅಂಬೇಡ್ಕರ್ ವೃತ್ತ, ನಂತೂರು, ಪಿವಿಎಸ್ ಸರ್ಕಲ್, ಆರ್‌ಟಿಒ ಕಚೇರಿ, ಅತ್ತಾವರದ ಕಾಪ್ರಿಗುಡ್ಡ, ಎಸ್.ಎಲ್. ನಾಯಕ್, ಭವಿಷ್ಯ ನಿಧಿ ಕಚೇರಿ ರಸ್ತೆ ಮೊದಲಾದೆಡೆಗಳಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿಯಿತಲ್ಲದೆ, ಈ ಪ್ರದೇಶಗಳಲ್ಲಿ ಕೆಲವೆಡೆ ನೀರು ನಿಂತು ವಾಹನ ಸಂಚಾರರು ಪರಡಾಡಬೇಕಾಯಿತು. ಮಾತ್ರವಲ್ಲದೆ ಪಾದಚಾರಿಗಳು ವಾಹನಗಳಿಂದ ನೀರು ಸಿಂಚನವಾಗುವ ಆತಂಕವನ್ನು ಎದುರಿಸಬೇಕಾಯಿತು.
ಕಾಪ್ರಿಗುಡ್ಡದ ಬಳಿಯ ಕೆಲ ಅಂಗಡಿಗಳ ಮೆಟ್ಟಿಲವರೆಗೂ ಮಳೆ ನೀರು ನಿಂತಿದ್ದು, ಎಸ್.ಎಲ್. ಮಥಾಯಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡದ ಎದುರು ನೀರು ಮ್ಯಾನುವೆಲ್ ತುಂಬಿ ಹೊರಗೆ ಹರಿಯುತ್ತಿರುವುದು ಕಂಡುಬಂತು.
ಪಿವಿಎಸ್ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಸಣ್ಣ ಪುಟ್ಟ ಹೊಂಡಗಳು, ನಂತೂರು ಬಳಿಯೂ ಹೊಂಡಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಬೇಡ್ಕರ್ ಸರ್ಕಲ್ ಬಳಿ ಕೃತಕ ನೆರೆ
ನಗರದ ವಾಹನ ದಟ್ಟಣೆಯ ಪ್ರದೇಶವಾಗಿರುವ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿ ಬಾರಿಯೂ ಮಳೆಯ ಸಂದರ್ಭ ಆರಂಭದ ದಿನಗಳಲ್ಲಿ ನೀರು ನಿಂತು ಸಂಚಾರ ಅಡಚಣೆಯ ಸಮಸ್ಯೆಯಾಗುತ್ತದೆ. ಈ ಬಾರಿಯೂ ಈ ಅವ್ಯವಸ್ಥೆ ಮುಂದುವರಿದಿದೆ.
ಅಂಬೇಡ್ಕರ್ ಸರ್ಕಲ್ ಬಳಿಯ ಮಹಿಳಾ ಕಾಲೇಜಿನ ಎದುರು ಇಂದು ಸುರಿದ ಧಾರಾಕಾರ ಮಳೆಯಿಂದ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿ ಸುಗಮ ಸಂಚಾರಕ್ಕೆ ಅಡಣೆಯುಂಟಾಯಿತು. ಕೊನೆಗೆ ಸಂಚಾರಿ ಪೊಲೀಸರು ಮನಪಾಕ್ಕೆ ಈ ಬಗ್ಗೆ ದೂರು ನೀಡಬೇಕಾಯಿತು.
ಮಾತ್ರವಲ್ಲದೆ ನಗರದ ಭವಂತಿ ಸ್ಟ್ರೀಟ್, ಕರ್ನಾಟಕ ಬ್ಯಾಂಕ್ ಸರ್ಕಲ್, ಬಾಲಾಜಿ ಜಂಕ್ಷನ್, ದುರ್ಗಾ ಮಹಲ್ ಜಂಕ್ಷನ್, ಲೇಡಿಹಿಲ್ ಸರ್ಕಲ್, ದಡ್ಡಲ್‌ಕಾಡು ಕ್ರಾಸ್ ರಸ್ತೆ ಮೊದಲಾದೆಡೆ ರಸ್ತೆಗಳ ಪಕ್ಕ ಅಗೆಯಲಾಗಿದ್ದು, ಮಳೆಯ ಸಂದರ್ಭ ವಾಹಗಳ ಸಂಚಾರಕ್ಕೆ ತೊಂದರೆಯಾಗಿದೆ.
ಮುಂಗಾರುವಿನ ಆರಂಭದಲ್ಲೇ ನಗರದಲ್ಲಿ ಇಂತಹ ಪರಿಸ್ಥಿತಿಯಾದರೆ ಜಡಿ ಮಳೆಗೆ ನಗರದ ಪರಿಸ್ಥಿತಿ ಹೇಗಾಗಬಹುದು ಎಂಬ ಆತಂಕವನ್ನು ಮೂಡಿಸಿದೆ.







