ಪ್ರತಿ ಮಗುವಿಗೆ ಶಿಕ್ಷಣ ಸಿಗುವಂತೆ ಮಾಡುವುದು ಪ್ರತಿ ನಾಗರಿಕನ ಜವಾಬ್ದಾರಿ:ನ್ಯಾ. ಆರ್.ಉಷಾರಾಣಿ

ಸೊರಬ, ಜೂ.5: ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ಪ್ರತಿ ಮಗುವಿಗೆ ಶಿಕ್ಷಣ ಸಿಗುವಂತೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಆರ್.ಉಷಾರಾಣಿ ತಿಳಿಸಿದರು.
ಪಟ್ಟಣ ಪಂಚಾಯತ್ ಮುಂಭಾಗದಲ್ಲಿ' ಬಾಲ್ಯ ವಿವಾಹ ತಡೆ'ಮತ್ತು' ಶಾಲೆ ಕಡೆ ನನ್ನ ನಡೆ' ಎಂಬ ಬೃಹತ್ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಬಾಲ್ಯವಿವಾಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳನ್ನು ತಡೆಯದಿದ್ದರೆ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಾಲ್ಯವಿವಾಹದಿಂದಾಗಿ ದಂಪತಿಗಳು ಕೌಟಂಬಿಕವಾಗಿ ಸಮರ್ಥರಲ್ಲದೆ ಕುಟುಂಬವು ಬೀದಿಪಾಲಾಗುತ್ತದೆ. ಜೊತೆಗೆ ಹೆಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಹುಟ್ಟುವ ಮಗುವಿನ ಗರ್ಭಧಾರಣೆ, ಹಾಗೂ ಹುಟ್ಟುವ ಮಗು ಕೂಡ ಅಂಗವಿಕಲರಾಗಬಹುದು. ಇದರಿಂದ ಅವರ ಕೌಟುಂಬಿಕ ಜೀವನ ಮಾನಸಿಕವಾಗಿ ಜರ್ಜರಿತರಾಗಿ ಆರ್ಥಿಕ ಹಾಗೂ ಸಮಾಜಿಕವಾಗಿ ಸಮಾಜದಲ್ಲಿ ಹೊರೆಯಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಇಂತಹ ಪದ್ದತಿಯನ್ನು ಹೋಗಲಾಡಿಸಲು ಜಾಗೃತರಾಗಬೇಕು ಎಂದರು.
ಶಾಲೆ-ಕಡೆ ನನ್ನ-ನಡೆ ಎಂಬ ಶೀರ್ಷಿಕೆಯಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬಡತನ ಹಾಗೂ ಇನ್ಯಾವುದೋ ಕಾರಣದಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಪ್ರತಿಯೊಬ್ಬರನ್ನೂ ಶಾಲೆಗೆ ಕರೆತಂದು ಶಿಕ್ಷಿತರನ್ನಾಗಿ ಮಾಡಬೇಕು. ಸರಕಾರವು ಮಕ್ಕಳ ಶಿಕ್ಷಣಕ್ಕೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡಿದೆ. ಇದರಿಂದ ಬಡತನವೆಂಬ ನೆಪವೊಡ್ಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವುದರ ಮೂಲಕ ಉತ್ತಮ ಸಾಕ್ಷರತಾ ಸಮಾಜವನ್ನು ನಿರ್ಮಾಣ ಮಾಡಲು ಕೈ ಜೋಡಿಸಬೇಕೆಂದು ಕರೆ ನೀಡಿದರು.
ನ್ಯಾ. ರಾಘವೇಂದ್ರ ಶೆಟ್ಟಿಗಾರ್, ಪ.ಪಂ ಅದ್ಯಕ್ಷೆ ಬೀಬೀ ಝುಲೇಖಾ, ವಕೀಲರ ಸಂಘದ ಕಾರ್ಯದರ್ಶಿ ರಾಮಪ್ಪ, ಉಪತಹಶೀಲ್ದಾರ್ ಅಂಬಾಜಿ, ಸರ್ಕಾರಿ ಅಭಿಯೋಜಕ ಸಂಜೀವ್ ಜೋಶಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ಸಿ ದಿವಾಕರ್, ಮಹಿಳಾ ಸಂರಕ್ಷಣಾಧಿಕಾರಿ ನಾಗರತ್ನ ನಾಯ್ಕ, ಪಪಂ ಮುಖ್ಯಾಧಿಕಾರಿ ಬಾಲಚಂದ್ರ, ವಕೀಲರಾದ ಹೆಚ್.ಬಿ ಇಂೂಧರ್ ಒಡೇಯರ್, ಎಂ.ನಾಗಪ್ಪ, ಹೆಚ್.ಎಂ.ಪ್ರಶಾಂತ,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಚಿ ಹನುಮತಂಪ್ಪ, ಸದಸ್ಯರಾದ ಸುಜಾಯತ್ ವುಲ್ಲಾ, ಎಂ.ಡಿ.ಉಮೇಶ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.







