ಪಿಲಿಕುಳದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಂಗಳೂರು, ಜೂ. 5: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್‌ರವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು.
ವಿಶ್ವ ಪರಿಸರ ದಿನಾಚರಣೆಯು ಒಂದು ದಿನಕ್ಕೆ ಸೀಮಿತವಾಗಬಾರದು, ಪ್ರತಿಯೊಬ್ಬರೂ ಪರಿಸರದೊಂದಿಗೆ ಬೆರೆತು ಅದರ ರಕ್ಷಣೆ ಮಾಡಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆಯ ಮೊದಲು ಪರಿಸರವನ್ನು ಪೂಜೆ ಮಾಡುತಿತಿದ್ದರು. ಈ ಬಗ್ಗೆ ನಾವು ಅವಲೋಕನ ಮಾಡಬೇಕಾಗಿದೆ ಎಂದರು. ಇಂದಿನ ಯುವಜನತೆ ತಂತ್ರಜ್ಞಾನಕ್ಕೆ ದಾಸರಾಗುವುದನ್ನು ಬಿಟ್ಟು ಪರಿಸರವನ್ನು ಅರಿಯುವ ಅದರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಬೇಕೆಂದು ಜಿಲ್ಲಾಧಿಕಾರಿಯವು ಯುವಕರಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಹಿರಿಯ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂದು ಪರಿಸರ ಹಾಗೂ ಮಾನವರ ನಡುವಿನ ಸಂಪರ್ಕದ ಕೊಂಡಿಯ ಬಗ್ಗೆ ಅರಿವಿಲ್ಲವಾಗಿದೆ. ಆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಜಿಲ್ಲೆಯ ಸುಮಾರು 350 ಬಿ.ಎಡ್. ಪ್ರಶಿಕ್ಷಣಾರ್ಥಿಗಳು, ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ವಹಿಸಿದ್ದರು.
ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರೊ. ಅಶೋಕ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ಎಚ್. ಎಸ್. ಶೆಣೈ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಬಿ.ಎಡ್. ವಿದ್ಯಾರ್ಥಿಗಳು ಸಸ್ಯ ಉದ್ಯಾನವನದಲ್ಲಿ ಗಿಡಗಳನ್ನು ನೆಟ್ಟರು. ನಂತರ ಅವರಿಗೆ ಪಶ್ಚಿಮ ಘಟ್ಟದ ಸಸ್ಯಗಳ ಮಾಹಿತಿ, ಔಷಧೀಯ ಗಿಡಗಳ ಪರಿಚಯ, ಎರೆಹುಳ ಗೊಬ್ಬರ ತಯಾರಿ ಮತ್ತು ಕಸಿ ಕಟ್ಟುವಿಕೆ ಪ್ರಾತ್ಯಕ್ಷಿಕೆ ನೀಡಲಾಯಿತು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೇಂದ್ರ ವಿಷಯದ ಮೇಲೆ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ರಾಮಕೃಷ್ಣ ಮರಾಟಿ, ಜಗನ್ನಾಥ, ಉದಯಕುಮಾರ ಶೆಟ್ಟಿ, ಕು. ಸ್ವಪ್ನಾ ಮತ್ತು ಜಯರಾಮ ಸಹಕರಿಸಿದರು.
ಈ ಸಂದರ್ಭ ಈಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ತ್ರಗಳನ್ನು ವಿತರಿಸಲಾಯಿತು. ದಿನೇಶ್ ನಾಯಕ್, ಡಾ. ಚಂದ್ರಶೇಖರ ಶೆಟ್ಟಿ ಮತ್ತು ಪ್ರೊ. ಅಶೋಕ್ ಕಾಮತ್ ಭಾಗವಹಿಸಿದ್ದರು.







