ತಹಶೀಲ್ದಾರ್ ನೇತೃತ್ವದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ
ಶಿವಮೊಗ್ಗ, ಜೂ. 5: ನಗರದ ಹೊರವಲಯ ವಾದಿ ಎ ಹುದಾ ಬಡಾವಣೆಯಲ್ಲಿ ಭೂ ಪರಿವರ್ತನೆ ಮಾಡಿಸದೆ, ಸಂಬಂಧಪಟ್ಟ ಪ್ರಾಧಿಕಾರಗಳ ಅನುಮತಿ ಪಡೆಯದೆ, ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಲೇಔಟ್ ಪ್ರದೇಶದ ಮೇಲೆ ಸೋಮವಾರ ತಹಶೀಲ್ದಾರ್ ಕೇಶವಮೂರ್ತಿ ದಾಳಿ ನಡೆಸಿದರು.
ಲೇಔಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದ ಚರಂಡಿ ಹಾಗೂ ರಸ್ತೆಯನ್ನು ಜೆಸಿಬಿಯ ಮೂಲಕ ತಾಲೂಕು ಆಡಳಿತದ ಅಧಿಕಾರಿಗಳು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆ ಪ್ರದೇಶ ವ್ಯಾಪ್ತಿಯ ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದರು.
ಯಾವುದೇ ಲೇಔಟ್ ರಚನೆ ಮಾಡುವ ಮುನ್ನ ಸಂಬಂಧಿಸಿದ ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡಿಸಬೇಕು. ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳ ಅನುಮತಿ ಪಡೆಯಬೇಕು. ನಕ್ಷೆ ಅನುಮೋದಿಸಬೇಕು. ಆ ನಂತರವೇ ಲೇಔಟ್ ಚನೆ ಪ್ರಕ್ರಿಯೆ ಆರಂಭಿಸಬೇಕು.
ಆದರೆ ವಾದಿ ಎ ಹುದಾ ಬಡಾವಣೆಯಲ್ಲಿ ಖಾಸಗಿ ವ್ಯಕ್ತಿಯೋರ್ವರು ಭೂ ಪರಿವರ್ತನೆ ಮಾಡಿಸದೆ, ಸಂಬಂಧಿಸಿದ ಇಲಾಖೆಗಳ ಪೂರ್ವಾನುಮತಿ ಪಡೆಯದೆ 4 ಎಕರೆ 4 ಗುಂಟೆ ಕೃಷಿ ಜಮೀನಿನಲ್ಲಿ ಲೇಔಟ್ ರಚನೆ ನಡೆಸುತ್ತಿದ್ದರು’ ಎಂದು ತಹಶೀಲ್ದಾರ್ ಕೇಶವುೂರ್ತಿಯವರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಲಾಯಿತು. ಈ ವೇಳೆ ಅನಧಿಕೃತವಾಗಿ ಲೇಔಟ್ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿತು. ಜೆಸಿಬಿಯ ಮೂಲಕ ರಸ್ತೆ, ಚರಂಡಿಯನ್ನು ತೆರವುಗೊಳಿಸಲಾಯಿತು.
ಸಂಬಂಧಿಸಿದ ಜಮೀನಿನ ವಾರಸುದಾರರಿಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 96 ರ ಅನ್ವಯ ನೋಟೀಸ್ ಜಾರಿಗೊಳಿಸಲಾಗಿದ್ದು, ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ ಎಂದು ತಹಶೀಲ್ದಾರ್ ಕೇಶವಮೂರ್ತಿಯವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.









