ಸಸ್ಯ ಸಂಪತ್ತು ನಾಡಿನ ಪ್ರಗತಿಯ ನಿಜವಾದ ಮಾನದಂಡ: ಚಟ್ನಳ್ಳಿ ಮಹೇಶ್
ತೇಗೂರು ಮುರಾರ್ಜಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಚಿಕ್ಕಮಗಳೂರು, ಜೂ.5: ನಿಸರ್ಗದಲ್ಲೆ ದೇವರನ್ನು ಕಂಡ ಜನಪದ ಸಂಸ್ಕೃತಿ ನಮ್ಮದು. ಸಸ್ಯ ಸಂಪತ್ತೆ ನಾಡಿನ ಪ್ರಗತಿಯ ನಿಜವಾದ ಮಾನದಂಡ ಎಂದು ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.
ಅವರು ಸೋಮವಾರ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನವು ತೇಗೂರು ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲಾವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಪರಿಸರದಿನ ಸಮಾರಂಭದಲ್ಲಿ ಮಾತನಾಡಿದರು. ನಿಸರ್ಗ ಮುಂದಿನ ಪೀಳಿಗೆಯ ಆಸ್ತಿ. ಪರಿಸರ ಪ್ರಜ್ಞೆ ಮತ್ತು ಪ್ರತಿಯೊಬ್ಬಲ್ಲೂ ಬೆಳೆಯಬೇಕು. ಮರನೆಟ್ಟರೆ ವರ, ಮರಕಡಿದರೆ ಬರ ಎಂಬ ಗಾದೆ ಮಾತು ಸ್ಮರಣೀಯ. ವೃಕ್ಷ ಕಡಿದರೆ ಭಿಕ್ಷೆ ಖಂಡಿತ ಎಂಬ ಉಕ್ತಿಯನ್ನು ಮರೆಯಬಾರದು ಎಂದರು.
ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಸೀಮಾ ಗಿಡನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ವೃಕ್ಷಗಳನ್ನು ನಾವು ರಕ್ಷಿಸಿದರೆ ವೃಕ್ಷಗಳು ನಮ್ಮನ್ನು ರಕ್ಷಿಸುತ್ತವೆ. ವೃಕ್ಷಗಳು ಬದುಕ್ಕಿದ್ದಾಗ ಮತ್ತು ಸತ್ತಾಗಲು ಬೆಳೆಬಾಳುತ್ತದೆ. ಅರಳಿಮರದ ಕೆಳಗೆ ಹಿಂದೆ ನ್ಯಾಯಪಂಚಾಯತ್ ನಡೆಯುತ್ತಿದ್ದವು. ಹಿರಿಯರು ಸೂರ್ಯ, ವಾಯು, ವೃಕ್ಷ ಪೂಜೆ ಮಾಡುತ್ತಿದ್ದರು. ಋತುಗಳಿಗೆ ಅನುಸಾರವಾಗಿ ವಿವಿಧ ಹಬ್ಬಗಳನ್ನು ಆಚರಿಸುತ್ತಿದ್ದುದು ನಿಸರ್ಗಸಂರಕ್ಷಣೆಯ ಭಾಗವಾಗಿತ್ತು ಎಂದರು.
ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಬಿಂದುಮಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಾಮಾಜಿಕನ್ಯಾಯ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಸಮಾರಂಭ ಉದ್ಘಾಟಿಸಿದರು. ನಿವೃತ್ತ ಮುಖ್ಯಶಿಕ್ಷಕ ಶಿವಕುಮಾರ್, ವಿದ್ಯಾರ್ಥಿಗಳಾದ ಚರಣ್ ಮತ್ತು ಫಿಸಾಸಂಶದ್, ಪ್ರಭಾರಿ ಪ್ರಾಂಶುಪಾಲ ಅಂಜನಪ್ಪ ಪರಿಸರ ಮಹತ್ವಕುರಿತಂತೆ ಮಾತನಾಡಿದರು. ಮಕ್ಕಳೊಂದಿಗೆ ನಿಸರ್ಗಕ್ಕೆ ಸಂಬಂಧಪಟ್ಟಂತೆ ಸಂವಾದ ನಡೆಸಲಾಯಿತು.
ಸಹಾಯಕ ವಲಯಸಂರಕ್ಷಣಾಧಿಕಾರಿ ರಮೇಶ್, ಅರಣ್ಯ ರಕ್ಷಕಿ ರಾಧಮ್ಮ, ಶಿಕ್ಷಕರಾದ ಪ್ರದೀಪ್, ಶಿಲ್ಪಾ, ನೇತ್ರ, ಅಂಜನಪ್ಪ, ತೇಜಸ್ವಿನಿ, ಮಮತಾ ಮತ್ತು ಶಿವಕುಮಾರ್ ಪಾಲ್ಗೊಂಡಿದ್ದರು. ಮಾ.ಸಂ.ಪ್ರ.ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿಕ್ಷಕರಾದ ಚಂದ್ರಶೇಖರ್ ನಿರೂಪಿಸಿ, ರಾಕೇಶ್ ವಂದಿಸಿದರು.







