ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಪಾವತಿ
ಉಡುಪಿ, ಜೂ.5: ಹಿಂದುಳಿದ ವರ್ಗಗಳ ಪ್ರವರ್ಗ-1ರ 1ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು 2017-18ನೇ ಸಾಲಿನಿಂದ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಆದ್ದರಿಂದ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಕೋರ್ ಬ್ಯಾಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್‌ಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕ್‌ನ ಐಎಫ್‌ಎಸ್‌ಸಿ ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ, ಆಧಾರ ಕಾರ್ಡ್‌ನ ಜೆರಾಕ್ಸ್ ಪ್ರತಿ ಹಾಗೂ ವಿದ್ಯಾರ್ಥಿಯ/ ಪೋಷಕರ ಜಾತಿ ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುವಂತೆ ತಿಳಿಸಲಾಗಿದೆ.
ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಂದ ಪಡೆದ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ ಮತ್ತು ಆಧಾರ್ ಪತ್ರದ ಜೆರಾಕ್ಸ್ ಪ್ರತಿಗಳ ದಾಖಲೆಗಳೊಂದಿಗೆ ಜೂ.30ರೊಳಗೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.
ಆದ್ದರಿಂದ ಎಲ್ಲಾ ಪೋಷಕರು ಈ ಮೇಲಿನ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೂಡಲೇ ನೀಡುವಂತೆ ತಿಳಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು ಸಹ ಅರ್ಹ ವಿದ್ಯಾರ್ಥಿಗಳ ಪೋಷಕರಿಗೆ ಈ ಸಂಬಂಧ ತಿಳುವಳಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







