ಸರಕಾರಿ ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಕೆಗೆ ಶಿಕ್ಷಣ ಇಲಾಖೆ ನಿರಾಕರಣೆ: ಧರಣಿ

ಬಂಟ್ವಾಳ, ಜೂ. 5: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದನೆ ತರಗತಿಯಿಂದ ಐದನೆ ತರಗತಿ ವರೆಗೆ ಆಂಗ್ಲ ಭಾಷೆ ಕಲಿಕೆಯನ್ನು ಕಳೆದ ವರ್ಷದಂತೆ ಮುಂದುವರಸಿಕೊಂಡು ಹೋಗಲು ಹೈಕೋರ್ಟ್ ಆದೇಶ ನೀಡಿದರೂ ಒಂದರಿಂದ ಐದನೆ ತರಗತಿವರಗೆ ಆಂಗ್ಲ ಭಾಷೆಯಲ್ಲಿ ಪಠ್ಯ ನೀಡಲು ಶಿಕ್ಷಣ ಇಲಾಖೆ ನಿರಾಕರಿಸಿದೆ.
ಸೋಮವಾರ ಪಠ್ಯ ಪುಸ್ತಕ ತರಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೋಗಿದ್ದ ಶಾಲಾ ಮುಖ್ಯೋಪಾಧ್ಯಾಯರಿಗೆ ಪಠ್ಯ ಪುಸ್ತಕ ನೀಡಲು ಇಲಾಖಾಧಿಕಾರಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಪೋಷಕರು ವಿದ್ಯಾರ್ಥಿಗಳೊಂದಿಗೆ ದಿಢೀರ್ ಧರಣಿ ಸತ್ಯಾಗ್ರಹ ನಡೆಸಿದರು.
ಮಧ್ಯಾಹ್ನ 12 ಗಂಟೆಯ ವೇಳೆಗೆ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು ಸಂಜೆ 4 ಗಂಟೆಯವರೆಗೂ ಮುಂದುವರೆಯಿತು. ಆಂಗ್ಲ ಮಾಧ್ಯಮದಲ್ಲಿ ಪಠ್ಯ ಪುಸ್ತಕ ನೀಡಿ, ನೀಡುವುದಿಲ್ಲವೆಂದಾದರೆ ಲಿಖಿತವಾಗಿ ಬರೆದು ಕೊಡಿ ಎನ್ನುವ ಬೇಡಿಕೆಗಳನ್ನು ಪ್ರತಿಭಟನಕಾರರು ಮುಂದಿಟ್ಟಿದ್ದರು. ಈ ನಡುವೆ ಎರಡು ಬಾರಿ ಇಲಾಖಾಧಿಕಾರಿಗಳು ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಮಾತುಕತೆ ಫಲಪ್ರಧವಾಗಲಿಲ್ಲ. ಬೇಡಿಕೆಗೆ ಸ್ಪಂದಿಸದಿದ್ದರೆ ಬೀಗ ಜಡಿದು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಎಸೈ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನಕಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ದಡ್ಡಲಕಾಡು ಶಾಲೆಗೆ ಕಳೆದ ಬಾರಿ ನಾವು ಆಂಗ್ಲ ಮಾಧ್ಯದ ಪುಸ್ತಕಗಳನ್ನು ಅಧಿಕೃತವಾಗಿ ನೀಡಿಲ್ಲ. ಇದಕ್ಕೆ ಯಾವುದೇ ಇಂಡೆಂಟ್ ಇಲ್ಲ. ಖಾಸಗಿ ಶಾಲೆಗಳಿಗೆ ನೀಡಲು ಬಂದಿದ್ದ ಹೆಚ್ಚುವರಿ ಪುಸ್ತಕಗಳನ್ನೇ ದಡ್ಡಲಕಾಡು ಶಾಲೆಗಳಿಗೆ ನೀಡಲಾಗಿದೆ ಎಂದು ಇಲಾಖಾಧಿಕಾರಿ ಮಾಹಿತಿ ನೀಡಿದರು. ಪುಸ್ತಕವೇನೋ ಕೊಟ್ಟಿಲ್ಲ, ಆದರೆ ಆಂಗ್ಲ ಮಾಧ್ಯಮದಲ್ಲೇ ಪರೀಕ್ಷೆ ಬರೆಯಲು ಪಶ್ನೆಪತ್ರಿಕೆಯನ್ನು ಶಿಕ್ಷಣ ಇಲಾಖೆ ಯಾಕೆ ಕೊಟ್ಟಿದೆ? ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ವಾದ ಪ್ರತಿವಾದ ಗೊಂದಲಗಳಿಂದಾಗಿ ಮಾತುಕತೆಯಲ್ಲಿ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದ ಕಾರಣ ಮತ್ತೆ ನ್ಯಾಯಾಲಯದ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಯಿತು.
ಈ ವೇಳೆ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಪ್ರಗತಿಪರ ಕೃಷಿಕ ರಾಜೇಶ್‌ನಾಕ್ ಉಳಿಪಾಡಿಗುತ್ತು, ನಗರ ಠಾಣಾ ಎಸೈ ರಕ್ಷಿತ್ ಎ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ರಾಮಚಂದ್ರ ಕರೆಂಕಿ, ಪೂವಪ್ಪ ಮೆಂಡನ್, ಪುರುಷೋತ್ತಮ ಅಂಚನ್,ನಂದರಾಮ್ ರೈ, ರಮನಾಥ ರಾಯಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.







