ಜೂ.8: ಮಲಯಾಳಂ ಕಡ್ಡಾಯ ವಿರೋಧಿಸಿ ಕಾಸರಗೋಡು ಚಲೋ
ಉಡುಪಿ, ಜೂ.5: ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯ ಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜೂ.8ರಂದು ಕಾಸರಗೋಡು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9ಗಂಟೆಗೆ ಉಡುಪಿಯಿಂದ ರ್ಯಾಲಿ ಹೊರಟು ಕಾಸರಗೋಡು ಗಡಿ ಬಂದ್ ಚಳವಳಿ ನಡೆಸಲಾಗುವುದು. ಕಾಸರಗೋಡು ಕರ್ನಾಟಕಕ್ಕೆ ಸೇರಿಸ ಬೇಕೆಂಬ ಮಹಾಜನ್ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸ ಬೇಕು. ಕಾಸರಗೋಡು ಕರ್ನಾಟಕಕ್ಕೆ ಸೇರುವವರೆಗೆ ನಿರಂತರ ಹೋರಾಟ ನಡೆಸ ಲಾಗುವುದು ಎಂದರು.
12ರಂದು ಕರ್ನಾಟಕ ಬಂದ್:
ರೈತರ ಸಾಲ ಮನ್ನಾ, ಮೇಕೆದಾಟು ಯೋಜನೆ ಹಾಗೂ ರಾಜ್ಯದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜೂ.12ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ತಿಳಿಸಿದರು.
ರೈತರು ರಾಜಕಾರಣಿಗಳ ಮತ್ತು ಆಡಳಿತ ವರ್ಗಗಳ ನಿರ್ಲಕ್ಷಕ್ಕೆ ಗುರಿ ಯಾಗುತ್ತ ಬಂದಿದ್ದು, ಸಾಲದಿಂದ ಕಂಗಲಾಗಿದ್ದಾರೆ. ಮೇಕೆ ದಾಟು ಯೋಜನೆ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯಕ್ಕೆ ನ್ಯಾಯ ದೊರಕಿಸಬೇಕು. ಬೆಳಗಾವಿ ವಿಚಾರವಾಗಿ ಪದೇ ಪದೇ ತಗಾದೆ ತೆಗೆದು ಕನ್ನಡಿಗರ ಸ್ವಾಭಿಮಾನವನ್ನು ಕೆದಕು ತ್ತಿರುವ ಎಂಇಎಸ್‌ನ್ನು ರಾಜ್ಯದಲ್ಲಿ ನಿಷೇಧಿಸಿ ಅದರ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಉಪಾಧ್ಯಕ್ಷ ಶಿವರಾಜ ಗೌಡ, ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಮುಖಂಡರಾದ ಸಂಪತ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಸತೀಶ್ ಪಾಟೀಲ್ ಉಪಸ್ಥಿತರಿದ್ದರು.







