ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲ್ಪಟ್ಟ ವ್ಯಕ್ತಿ ಸಾವು
ಮಂಗಳೂರು, ಜೂ. 5: ವಿಚಾರಣೆಗಾಗಿ ಠಾಣೆಗೆ ಕರೆದೊಯ್ಯಲ್ಪಟ್ಟ ವ್ಯಕ್ತಿಯೊಬ್ಬರು ಎದೆನೋವಿನಿಂದ ಅಸಹಜವಾಗಿ ಸಾವಿಗೀಡಾದ ಘಟನೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಮೃತರನ್ನು ಕಾವೂರು ಬೊಲ್ಪುಗುಡ್ಡೆಯ ನಿವಾಸಿ ಮೆಲ್ವಿನ್ ಜಾನ್ (39) ಎಂದು ಗುರುತಿಸಲಾಗಿದೆ.
ಮರವೂರು ಡ್ಯಾಂ ಬಳಿ ನಾಲ್ಕು ಮಂದಿ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ರವಿವಾರ ರಾತ್ರಿ 10:30ಕ್ಕೆ ಸ್ಥಳಕ್ಕೆ ಧಾವಿಸಿದ ಬಜ್ಪೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಯ್ದಿದ್ದರು. ಅವರನ್ನು ವಶಕ್ಕೆ ಪಡೆದ ಬಗ್ಗೆ ಅವರೆಲ್ಲರ ಮನೆಯವರಿಗೆ ಮಾಹಿತಿ ನೀಡಲಾಗಿತ್ತು.
ವಿಚಾರಣೆ ನಡೆಸುತ್ತಿರುವಾಗ ರಾತ್ರಿ 11:20ರ ವೇಳೆಗೆ ಮೆಲ್ವಿನ್ ಹಠಾತ್ತನೆ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮೆಲ್ವಿನ್ ಅವರ ಅಸಹಜ ಸಾವಿನ ಕುರಿತು ಅವರ ಸಹೋದರ ದೂರು ದಾಖಲಿಸಿದ್ದಾರೆ.
ತನಿಖೆಗೆ ಕಮಿಷನರ್ ಆದೇಶ: ಮೆಲ್ವಿನ್ ಜಾನ್ ಅವರ ಸಾವಿನ ಕುರಿತು ಆಂತರಿಕ ತನಿಖೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಡಿಸಿಪಿ (ಕಾನೂನು ಸುವ್ಯವಸ್ಥೆ) ನೇತೃತ್ವದಲ್ಲಿ ತನಿಖೆ ನಡೆಯಲಿದೆ..







