ಅಮೀರ್ ಆರೋಗ್ಯ ವಿಚಾರಿಸಿದ ಅಪರ ಜಿಲ್ಲಾಧಿಕಾರಿ
ಮೆಗ್ಗಾನ್ ಆಸ್ಪತ್ರೆ ಪ್ರಕರಣ
ಶಿವಮೊಗ್ಗ, ಮೇ.5: ಇಲ್ಲಿನ ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ವಾರ್ಡ್‌ನಿಂದ ಎಕ್ಸ್‌ರೇ ಕೊಠಡಿಗೆ ಕರೆದೊಯ್ಯಲು ಸಿಬ್ಬಂದಿಯು ವ್ಹೀಲ್ ಚೇರ್ ನೀಡಲು ನಿರಾಕರಿಸಿದ್ದರಿಂದ ವೃದ್ಧ ಪತ್ನಿಯು ಅನಾರೋಗ್ಯ ಪೀಡಿತ ವಯೋವೃದ್ಧ್ದ ಪತಿಯ ಕಾಲುಗಳನ್ನು ಹಿಡಿದು ಎಳೆದೊಯ್ದ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಪ್ರಕರಣದ ಕೇಂದ್ರ ಬಿಂಧುವಾದ ಅಮೀರ್ ಸಾಬ್‌ಅವರನ್ನು ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪಅವರು, ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಣೆ ನಡೆಸಿದರು. ಪತ್ನಿ ಪಮಿದಾರವರೊಂದಿಗೆ ಸಮಾಲೋಚಿಸಿದರು.
ಅಮೀರ್ ಸಾಬ್ ಆರೋಗ್ಯದ ಕುರಿತಂತೆ ಖಾಸಗಿ ಆಸ್ಪತ್ರೆಯ ವೈದ್ಯರ ಜೊತೆ ಅಪರ ಜಿಲ್ಲಾಧಿಕಾರಿ ಸುದೀರ್ಘ ಚರ್ಚೆ ನಡೆಸಿದರು. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಜೊತೆಗೆ ಜಿಲ್ಲಾಡಳಿತದಿಂದ ಅಗತ್ಯವಾದ ಎಲ್ಲ ರೀತಿಯ ನೆರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಖಾಸಗಿ ಆಸ್ಪತ್ರೆಯ ವೈದ್ಯರು ಮಾತನಾಡಿ, ಅಮೀರ್ ಸಾಬ್ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬರುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಯಾವುದೇ ಹಣ ಪಡೆಯದೆ ಉಚಿತವಾಗಿಯೇ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಸರಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಡಳಿತದಿಂದ ಆಸ್ಪತ್ರೆ ಆಡಳಿತ ಮಂಡಳಿಗೆ ಕೆಲ ಸಲಹೆ-ಸೂಚನೆಗಳನ್ನು ರವಾನಿಸಲಾಗಿದೆ. ಇಷ್ಟರಲ್ಲಿಯೇ ಜಿಲ್ಲಾಧಿಕಾರಿ ಆಸ್ಪತ್ರೆಯ ಪ್ರಮುಖರ ಸಭೆೆ ಕರೆದು ಚರ್ಚೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ದಲ್ಲಿಸರಕಾರಿ ಮೆಗ್ಗಾನ್ ಆಸ್ಪತ್ರೆಯ ಪ್ರಮುಖರಾದ ಡಾ. ರಘುನಂದನ್ , ಅಧೀಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.







