ಐವರು ಪೊಲೀಸರ ವಶಕ್ಕೆ
ಕಾರ್ಪೊರೇಶನ್ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣ
ಶಿವಮೊಗ್ಗ, ಜೂ.5: ನಗರದ ಬಿ.ಎಚ್.ರಸ್ತೆಯಲ್ಲಿರುವ ಕಾರ್ಪೊರೇಶನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಮೂವರು, ಶಿವಮೊಗ್ಗದ ಇಬ್ಬರು ಸೇರಿದಂತೆ ಐವರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ಬ್ಯಾಂಕ್‌ನಲ್ಲಿ ಕ್ಷೇತ್ರ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಮೂಲತಃ ಆಂಧ್ರಪ್ರದೇಶ ನಲ್ಲೂರು ಜಿಲ್ಲೆಯ ಮಧುಸೂದನ್(30), ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೋಟಯ್ಯ(35), ಅವರ ಪತ್ನಿ ಅರುಣ(27), ಶಿವಮೊಗ್ಗ ನಗರದ ಸೋಮಿನಕೊಪ್ಪದ ನಿವಾಸಿ ಶ್ರೀಧರ್(32), ತಾಲೂಕಿನ ಹರಮಘಟ್ಟದ ನಿವಾಸಿ ಗ್ರಾಪಂ ಉಪಾಧ್ಯಕ್ಷ ಹರೀಶ್(29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಮಧುಸೂದನ್ ನಗರದ ಗೋಪಾಳದ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ಕೋಟಯ್ಯ ದಂಪತಿಯೊಂದಿಗೆ ಆ ಮನೆಯಲ್ಲಿ ತಂಗಿದ್ದ ವೇಳೆ ಸಬ್‌ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಚಾರಣೆಯ ವೇಳೆ ಮಧುಸೂದನ್ ನೀಡಿದ ಮಾಹಿತಿಯ ಆಧಾರದ ಮೇಲೆ ಶ್ರೀಧರ್ ಹಾಗೂ ಹರೀಶ್ ಅವರನ್ನು ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಇನ್‌ಸ್ಪೆಕ್ಟರ್ ಗುರುರಾಜ್ ಅವರ ಮಾರ್ಗದರ್ಶನದಲ್ಲಿ ಸಬ್‌ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್ ಮತ್ತವರ ಸಿಬ್ಬಂದಿ ಈ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಾತ್ರವೇನು?: ಆರೋಪಿ ಮಧುಸೂದನ್ ರೈತರ ಹೆಸರಿನಲ್ಲಿ ಮಂಜೂರು ಮಾಡಿದ ಸಾಲವನ್ನು ಕೋಟಯ್ಯ, ಅವರ ಪತ್ನಿ ಅರುಣ, ಶ್ರೀಧರ್ ಹಾಗೂ ಹರೀಶ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದ ವಿಷಯ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಕೋಟ್ಯಂತರ ರೂ. ವರ್ಗಾವಣೆ ಮಾಡಿದ್ದ ಅಂಶ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಏನೀದು ಪ್ರಕರಣ?: ಆರೋಪಿ ಮಧುಸೂದನನು ರೈತರ ಹೆಸರಿನಲ್ಲಿ ಮಂಜೂರಾಗುತ್ತಿದ್ದ ಬೆಳೆಸಾಲ ಹಾಗೂ ಇತರ ಕೃಷಿ ಸಂಬಂಧಿತ ಸಾಲಗಳನ್ನು ರೈತರ ಖಾತೆಗೆ ಜಮಾ ಮಾಡದೆ ತನಗೆ ಪರಿಚಯವಿದ್ದ ವ್ಯಕ್ತಿಗಳ ಖಾತೆಗೆ ಜಮಾ ಮಾಡುತ್ತಿದ್ದ. ತದನಂತರ ಅವರ ಖಾತೆಯಿಂದ ಹಣ ಬಿಡಿಸಿಕೊಳ್ಳುತ್ತಿದ್ದ. ಈ ವಿಷಯ ರೈತರಿಗೆ ಗೊತ್ತಾಗುತ್ತಿರಲಿಲ್ಲ. ಇತ್ತೀಚೆಗೆ ಕೆಲ ರೈತರು ತಮಗೆ ಸಾಲ ಮಂಜೂರಾತಿಯಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಅಸಮಾಧಾನಗೊಂಡು ಬ್ಯಾಂಕ್ ಮ್ಯಾನೇಜರ್ ಭೆೇಟಿಯಾಗಿ ಚರ್ಚೆ ನಡೆಸಿದ್ದರು. ಮತ್ತೆ ಕೆಲ ರೈತರು ಪಾಸ್‌ಬುಕ್‌ಗಳನ್ನು ಎಂಟ್ರಿ ಮಾಡಿಸಿದ್ದರು. ಈ ವೇಳೆ ಲಕ್ಷಾಂತರ ರೂ. ಸಾಲ ಮಂಜೂರಾಗಿರುವುದನ್ನು ಗಮನಿಸಿ ಹೌಹಾರಿದ್ದರು.
ತಕ್ಷಣವೇ ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರೈತ ಸಂಘಟನೆಯು ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ಕೂಡ ನಡೆಸಿತ್ತು. ಪರಿಶೀಲನೆಯ ವೇಳೆ ರೈತರಿಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕ್‌ನವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಮಧುಸೂದನ್ ವಿರುದ್ಧ ದೂರು ದಾಖಲಿಸಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಸಬ್‌ಇನ್‌ಸ್ಪೆಕ್ಟರ್ ಅಭಯ್‌ಪ್ರಕಾಶ್ ಸೋಮನಾಳ್ ಅವರು ಮುಖ್ಯ ಆರೋಪಿ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
6 ಕೋಟಿ ರೂ.ಗೂ ಅಧಿಕ ವಂಚನೆ
ಈ ಮೊದಲು ಕಾರ್ಪೊರೇಶನ್ ಬ್ಯಾಂಕ್ ಶಾಖೆಯಲ್ಲಿ 4 ಕೋಟಿ ರೂ. ಮೊತ್ತದ ವಂಚನೆ ನಡೆದಿರುವ ಮಾಹಿತಿಯಿತ್ತು. ಪೊಲೀಸರ ತನಿಖೆಯ ವೇಳೆ ಸರಿಸುಮಾರು 6 ಕೋಟಿ ರೂ.ಗಳಿಗೆ ಅಧಿಕ ಮೊತ್ತ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಪೊಲೀಸರ ತನಿಖೆ ಮುಂದುವರಿದಿದ್ದು, ವಂಚನೆಯ ಮೊತ್ತ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.







