ಪರಿಸರದ ಜೊತೆ ಸಂಘರ್ಷ ಬೇಡ, ಸಾಮರಸ್ಯ ಇರಲಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ, ಜೂ.5: ಪ್ರಕೃತಿ ಜೊತೆ ಸಂಘರ್ಷಕ್ಕೆ ಇಳಿದರೆ ಅದರ ನಷ್ಟ ನಮಗೆ. ಆದುದರಿಂದ ಮಾನವ ಪರಿಸರದ ಜೊತೆ ಹೊಂದಾಣಿಕೆ ಹಾಗೂ ಸಾಮರಸ್ಯ ದಿಂದ ಸಾಗುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿ ಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಸ್ತೂರಿ ರಂಗನ್, ಗಾಡ್ಗೀಳ್ ವರದಿ ಸೇರಿದಂತೆ ಹಲವು ವರದಿಗಳು ಜನರ ಬದುಕನ್ನು ಮೊಟಕುಗೊಳಿಸುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದು ಜನರಲ್ಲಿ ಗೊಂದಲ ಮೂಡಿಸಿ ಪ್ರಕೃತಿ ಮತ್ತು ಮಾನವರ ಮಧ್ಯೆ ಸಂಘರ್ಷಕ್ಕೆ ಕಾರಣವಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರತಿ ವರ್ಷ ಸರಾಸರಿ 3500ರಿಂದ 4000 ಮಿಮೀ ಮಳೆ ಬೀಳುವ ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಶೇ.65ರಷ್ಟು ಹಿಂಗಾರು ಮಳೆ ಕೊರತೆ ಕಾಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಮೂರೂ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿವೆ. ಪ್ರಸ್ತುತ ಮಳೆ ಕಡಿಮೆ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ನಾವೆಲ್ಲ ಚಿಂತನೆ ಮಾಡ ಬೇಕಾಗಿದೆ. ಪರಿಸರದ ಜೊತೆ ಸಂಘರ್ಷ ಮಾಡಿದರೆ ತೊಂದರೆಗೆ ಒಳಗಾಗು ವವರು ನಾವೇ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಗಿಡಕ್ಕೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕಾ ಮಾತನಾಡಿ, ದೇಶದ ಅರಣ್ಯಗಳು, ಸರೋವರಗಳು, ವನ್ಯಮೃಗಗಳು ಸೇರಿದಂತೆ ನೈಸರ್ಗಿಕ ಪರಿಸರ ವನ್ನು ಸಂರಕ್ಷಿಸುವುದು ಮತ್ತು ಅಭಿವೃದ್ದಿಪಡಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ರಾಸಾಯನಿಕಗಳ ಬಳಕೆಯಿಂದ ಹಾನಿಯಾಗುತ್ತಿರುವ ಫಲವತ್ತಾದ ಭೂಮಿಯ ರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು.
ಪರಿಸರ ಸಂರಕ್ಷಣೆಯಿಂದ ಮಾತ್ರ ಮಾನವ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಮಕ್ಕಳಿಗೆ ಎಳವೆಯಿಂದಲೇ ಪರಿಸರ ಸಂರಕ್ಷಣೆಯ ತರಬೇತಿ ನೀಡ ಬೇಕು. ಸಮರ್ಪಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆ, ನೀರು ಸೇರಿದಂತೆ ನೈಸರ್ಗಿಕ ವಸ್ತುಗಳ ಪುರ್ನಬಳಕೆ, ಇಂಗುಗುಂಡಿ ನಿರ್ಮಾಣ, ಪ್ಲಾಸ್ಟಿಕ್ ಬಳಕೆ ನಿಷೇಧ, ಸೌರಶಕ್ತಿಯ ಬಳಕೆ, ಇಂಧನಗಳ ಕಡಿಮೆ ಬಳಕೆ ಕುರಿತು ಅರಿವು ಮೂಡಿಸುವುದರ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಮಿತಿಮೀರಿದ ಬಳಕೆಗೆ ಕಡಿವಾಣ ಹಾಕಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್, ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷೆ ಶಾಂತಾ ವಿ. ಆಚಾರ್ಯ, ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ನಿವೃತ್ತ ಪ್ರಾಂಶುಪಾಲ ಡಾ.ಎನ್.ಎ.ಮಧ್ಯಸ್ಥ ಪಕ್ಷಿಗಳ ಕುರಿತು, ಮಣಿಪಾಲ ಎಂಐಟಿಯ ಪ್ರೊ.ಎ.ಗಣೇಶ್ ತ್ಯಾಜ್ಯ ನೀರಿನ ಮರುಬಳಕೆ ಬಗ್ಗೆ ಹಾಗೂ ಪ್ರೊ.ಬಾಲಕೃಷ್ಣ ಕೆ. ಪರಿಸರ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಹಾಯಕ ಪರಿಸರ ಅಧಿಕಾರಿ ವಿವೇಕ್ ಗುಣಗ ಸ್ವಾಗತಿಸಿದರು. ಪ್ರಮೀಳಾ ಪರಿಸರ ಪ್ರತಿಜ್ಞೆ ಬೋಧಿಸಿದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದ ಆವರಣದಲ್ಲಿ ಜಿಲ್ಲಾ ನ್ಯಾಯಾಧೀಶರು ಗಿಡ ನೆಟ್ಟರು. ಅಜ್ಜರ ಕಾಡು ಮೈದಾನದಿಂದ ಕಲ್ಸಂಕ ಸರ್ಕಲ್‌ವರೆಗೆ ನಡೆದ ಪರಿಸರ ಜಾಥಕ್ಕೆ ಜಿಲ್ಲಾ ಧಿಕಾರಿಗಳು ಚಾಲನೆ ನೀಡಿದರು.
ಪರಿಸರ ಚಟುವಟಿಕೆಗೆ ಅಂಕ
ಈ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಅವರ ಪರಿಸರ ಚಟುವಟಿಕೆ ಗಳನ್ನು ಗುರುತಿಸಿ ಅಂಕಗಳನ್ನು ನೀಡಲಾಗುವುದು. ಜಿಲ್ಲಾಡಳಿತದ ವತಿಯಿಂದ ಶಿಕ್ಷಣ ಇಲಾಖೆಯ ಮೂಲಕ ಮಳೆಗಾಲ ಮುಗಿದ ಬಳಿಕ ತ್ಯಾಜ್ಯ ವಿಲೇವಾರಿ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಶಾಲೆ ಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.