ಮನೆಯಲ್ಲಿದ್ದ ಬಾಲಕಿಯರನ್ನು ಕಟ್ಟಿಹಾಕಿ 30 ಲಕ್ಷ ಮೌಲ್ಯದ ಸೊತ್ತುಗಳನ್ನು ದೋಚಿದ ದರೋಡೆಕೋರರು

ಲುಧಿಯಾನ, ಜೂ.5: ಕಿರಾಣಿ ಅಂಗಡಿ ಮಾಲಕರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಬಾಲಕಿಯರನ್ನು ಕಟ್ಟಿ ಹಾಕಿ ಹಣ, ಆಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳ ಸಹಿತ ಸುಮಾರು 30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದರೋಡೆಗೈದಿರುವ ಘಟನೆ ಜಗ್ರಾಂವ್ ನಲ್ಲಿ ನಡೆದಿದೆ.
ಮಾಲಕ್ ರೋಡ್ ಸಮೀಪದಲ್ಲಿರುವ ಮನೆಯ ಹೊರಗೆ ಬೈಕ್ ನಿಲ್ಲಿಸಿ ಕಿಟಕಿಯ ಗಾಜುಗಳನ್ನು ಒಡೆದು ಮನೆಯೊಳಕ್ಕೆ ನುಗ್ಗಿದ್ದಾರೆ, ಮನೆಯೊಳಗೆ 13 ವರ್ಷದ ಮೆಹಕ್ ಹಾಗೂ 10 ವರ್ಷದ ಹಿಮಾನಿ ಎಂಬ ಬಾಲಕಿಯರಿದ್ದು, ಅವರ ತಂದೆ, ಕಿರಾಣಿ ಅಂಗಡಿ ಮಾಲಕ ಜತೀಂದರ್ ಬೇರೆಡೆಗೆ ತೆರಳಿದ್ದರು. ಮುಸುಕುಗಳನ್ನು ಧರಿಸಿದ್ದ ಕಳ್ಳರು ಬಾಲಕಿಯರ ಕೈಗಳನ್ನು ಕಟ್ಟಿ ಹಾಕಿ, ಬೊಬ್ಬಿಟ್ಟರೆ ಕೊಲ್ಲುವುದಾಗಿ ಬೆದರಿಸಿದ್ದರು. ನಂತರ 10 ನಿಮಿಷಗಳೊಳಗಾಗಿ ಮನೆಯಲ್ಲಿದ್ದ ಬೆಲೆಬಾಳುವ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಬಾಲಕಿಯರು ಹೇಗೂ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ತಾಯಿಗೆ ಕರೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮನ್ ದೀಪ್ ಸಿಂಗ್ ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನು ದೋಚುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವೇ ದಾಳಿ ಕಳ್ಳತನ ನಡೆದಿರುವುದರಿಂದ ಪರಿಚಯಸ್ಥರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆಯಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.





