ಎರ್ಮಾಳು: ವಿಶ್ವಪರಿಸರ ದಿನಾಚರಣೆ

ಪಡುಬಿದ್ರೆ, ಜೂ.5: ಮಕ್ಕಳು ಗಿಡ ಮರಗಳ ಉಪಯುಕ್ತತೆಯನ್ನು ಅರಿತು ಪ್ರೀತಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪರಿಸರ ದಿನಾಚರಣೆಯು ಸಾಂಕೇತಿಕವಾಗಿ ಒಂದು ದಿನದ ಪ್ರೇಮವಾಗಿ ಉಳಿಯದೆ ಪರಿಸರದೊಂದಿಗೆ ಅನ್ಯೋನ್ಯತೆಯಿಂದ ಬಾಳುವ ಹಿರಿಯರ ಬದುಕನ್ನು ಅರ್ಥ ಮಾಡಿಕೊಂಡು ಈ ಬಗ್ಗೆ ಯುವ ಪೀಳಿಗೆ ಜಾಗೃತವಾಗಬೇಕು ಎಂದು ರೋಟರಿ ಸಂಸ್ಥೆಯ ಹಿರಿಯ ಮಾಧವ ಸುವರ್ಣ ಕರೆಯಿತ್ತರು.
ಅವರು ಸೋಮವಾರ ಎರ್ಮಾಳು ಸಂಯುಕ್ತ ಪ್ರೌಡ ಶಾಲೆ ಹಾಗೂ ಪಡುಬಿದ್ರೆ ರೋಟರಿ ಸಂಸ್ಥೆ ಜಂಟಿಯಾಗಿ ಶಾಲಾವರಣದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರೆ ರೋಟರಿ ಅಧ್ಯಕ್ಷ ಹಮೀದ್ ಪಡುಬಿದ್ರೆ ಅವರು ಪರಿಸರದ ಕಾಳಜಿಯಿಂದ ಮಾತನಾಡುತ್ತಾ ಮಕ್ಕಳ ಹುಟ್ಟು ಹಬ್ಬಗಳಂದು ಗಿಡಗಳನ್ನು ನೆಡುವ ಮತ್ತು ಗೆಳೆಯರಿಗೆ ಉಪಯುಕ್ತ ಸಸಿಗಳನ್ನು ನೀಡುವ ಮೂಲಕ ಮಾದರಿಯಾಗಿ ಆಚರಿಸ ಬೇಕು. ಸಭೆ-ಸಮಾರಂಭಗಳಲ್ಲಿ ಅತಿಥಿಗಳಿಗೂ ಗಿಡಗಳನ್ನು ಕೊಡುವ ಮೂಲಕ ಪರಿಸರ ಉಳಿಸಿ, ಪ್ರಾಕೃತಿಕ ಸಮತೋಲನ ಕಾಪಾಡಲು ಮಾದರಿ ಹೆಜ್ಜೆಗಳನ್ನಿಡುವುದು ಅವಶ್ಯ ಎಂದರು.
ಕಾರ್ಯಕ್ರಮವನ್ನು ಎರ್ಮಾಳು ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣ ಕುಮಾರಿ ಅವರು ಮಕ್ಕಳಿಗೆ ಸಸಿಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ, ನಮ್ಮ ಸುತ್ತ ಮುತ್ತ ಬೆಳೆಯುವ ಪ್ರಮುಖ 24 ಗಿಡಗಳನ್ನು ವಿದ್ಯಾರ್ಥಿಗಳು ಗುರುತಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿನಿ ಅಂಜಲಿಗೆ ಬಹುಮಾನ ನೀಡಿದರು.
ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಉಭಯ ಶಾಲಾ ಮುಖ್ಯ ಶಿಕ್ಷಕಿಯರಾದ ಸುನಿತಾ ಯು., ಮತ್ತು ಲಲಿತಾ, ಶಾಲಾ ದೈಹಿಕ ಶಿಕ್ಷಕ ವಿಪಿ ನಾಯಕ್, ಶಾಲಾ ಇಂಟರಾಕ್ಟ್ ಅಧ್ಯಕ್ಷ ಕಾರ್ತಿಕ್, ರೋಟರಿ ಸಂಸ್ಥೆಯ ರಮೀಝ್ ಮುಂತಾದವರು ಭಾಗವಹಿಸಿದ್ದರು.
ಪಡುಬಿದ್ರೆ ರೋಟರಿ ಅಧ್ಯಕ್ಷ ಹಮೀದ್ ಪಡುಬಿದ್ರೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸದಸ್ಯರಾದ ಸಂದೀಪ್ ಪಲಿಮಾರ್ ನಿರೂಪಿಸಿ, ಕಾರ್ಯದರ್ಶಿ ಕರುಣಾಕರ ನಾಯಕ್ ವಂದಿಸಿದರು.







