ಬೆಲ್ಜಿಯಂ ವಿರುದ್ಧ ಭಾರತ ತಂಡಕ್ಕೆ ರೋಚಕ ಜಯ
ತ್ರಿರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಮೆಂಟ್

ಡಸ್ಸಲ್‌ಡಾರ್ಫ್(ಜರ್ಮನಿ), ಜೂ.5: ಭಾರತದ ಡ್ರಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ ಬೆಲ್ಜಿಯಂ ವಿರುದ್ಧದ ತ್ರಿರಾಷ್ಟ್ರ ಆಹ್ವಾನಿತ ಹಾಕಿ ಟೂರ್ನಮೆಂಟ್‌ನಲ್ಲಿ 3-2 ಅಂತರದಿಂದ ಜಯ ಸಾಧಿಸಿದೆ.
ಭಾರತ ತಂಡ ಬೆಲ್ಜಿಯಂ ವಿರುದ್ಧ ಟೂರ್ನಿಯ ಮೊದಲ ಪಂದ್ಯವನ್ನು 1-2 ಅಂತರದಿಂದ ಸೋತಿತ್ತು. ಜರ್ಮನಿಯ ವಿರುದ್ಧದ ಎರಡನೆ ಪಂದ್ಯವನ್ನು 2-2ರಿಂದ ಡ್ರಾಗೊಳಿಸಿತ್ತು.
ಸೋಮವಾರ ನಡೆದ ತನ್ನ 3ನೆ ಪಂದ್ಯದಲ್ಲಿ ಹರ್ಮನ್‌ಪ್ರೀತ್(34ನೆ, 38ನೆ ನಿಮಿಷ) ಅವಳಿ ಗೋಲು ಬಾರಿಸಿದರು. ಫಾರ್ವರ್ಡ್ ಆಟಗಾರ ರಮನ್‌ದೀಪ್ ಸಿಂಗ್(49ನೆ ನಿಮಿಷ) ಒಂದು ಗೋಲು ಬಾರಿಸಿ ತಂಡಕ್ಕೆ ರೋಚಕ ಜಯ ತಂದರು.
ರವಿವಾರ ಜರ್ಮನಿ ವಿರುದ್ಧದ ಪಂದ್ಯವನ್ನು 1-2 ರಿಂದ ಸೋತಿದ್ದ ಬೆಲ್ಜಿಯಂ ತಂಡ ಸೋಮವಾರ ಉತ್ತಮ ಆರಂಭ ಪಡೆದಿತ್ತು. 13ನೆ ನಿಮಿಷದಲ್ಲಿ ಗೋಲು ಬಾರಿಸಿದ್ದ ಅವೌರಿ ಕೆಸ್ಟರ್ಸ್ ಬೆಲ್ಜಿಯಂಗೆ 1-0 ಮುನ್ನಡೆ ಒದಗಿಸಿಕೊಟ್ಟು ಭಾರತಕ್ಕೆ ಒತ್ತಡ ಹೇರಿದರು.
ಭಾರತ 23 ಹಾಗೂ 24ನೆ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದರೂ ಅದನ್ನು ಗೋಲಾಗಿ ಪರಿವರ್ತಿಸಿಕೊಳ್ಳಲಿಲ್ಲ. 34ನೆ ನಿಮಿಷದಲ್ಲಿ ಭಾರತ ತನಗೆ ಲಭಿಸಿದ 5ನೆ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿತು. 38ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಹರ್ಮನ್‌ಪ್ರೀತ್ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಬೆಲ್ಜಿಯಂ 45ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 2-2 ರಿಂದ ಸಮಬಲಗೊಳಿಸಿತು. 49ನೆ ನಿಮಿಷದಲ್ಲಿ ಗೋಲು ಬಾರಿಸಿದ ರಮನ್‌ದೀಪ್ ಸಿಂಗ್ ಭಾರತಕ್ಕೆ 3-2 ರಿಂದ ರೋಚಕ ಜಯ ತಂದುಕೊಟ್ಟರು.
ಭಾರತ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ.







