ತಂಡದ ಸಭೆಯಲ್ಲಿ ಸೆಹ್ವಾಗ್ ವರ್ತನೆ ಹಂಚಿಕೊಂಡ ಅಶ್ವಿನ್

ಹೊಸದಿಲ್ಲಿ, ಜೂ.5: ಭಾರತದ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಂಡದ ಸಭೆಯನ್ನು ಎಷ್ಟೊಂದು ದ್ವೇಷಿಸುತ್ತಿದ್ದರು ಎಂಬ ಸತ್ಯವನ್ನು ಸ್ಪಿನ್ನರ್ ಆರ್.ಅಶ್ವಿನ್ ಸೋಮವಾರ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.
2011ರ ವಿಶ್ವಕಪ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿದ ಅಶ್ವಿನ್,‘‘2011ರಲ್ಲಿ ಬೆಂಗಳೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕಿಂತ ಮೊದಲು ಬೆಳಗ್ಗೆ 10 ಗಂಟೆಗೆ ಕೋಚ್ ಗ್ಯಾರಿ ಕರ್ಸ್ಟನ್ ಅವರು ತಂಡದ ಸಭೆ ಕರೆದಿದ್ದರು. ತನಗೆ ಒಂದು ವಿಷಯ ಚರ್ಚಿಸಬೇಕಿದೆ ಎಂದು ಸಭೆಯ ಆರಂಭಕ್ಕೆ ಮೊದಲೇ ಕೋಚ್ ಕರ್ಸ್ಟನ್ ಬಳಿ ಸೆಹ್ವಾಗ್ ಹೇಳಿದ್ದರು. ಸೆಹ್ವಾಗ್ ಸಭೆಯಲ್ಲಿ ಸಲಹೆ ನೀಡಬಹುದು. ಅಥವಾ ಹಿಂದಿನ ಪಂದ್ಯದ ಬಗ್ಗೆ ಮಾತನಾಡಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ಎಲ್ಲ ಆಟಗಾರರಿಗೆ ಉಚಿತ ಪಾಸ್ ನೀಡಲೇಬೇಕೆಂದು ಸಭೆಯಲ್ಲಿ ಒತ್ತಾಯಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
‘‘ಸೆಹ್ವಾಗ್ ಪಾಸ್ ವಿಷಯದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದಾಗ ಎಲ್ಲರಿಗೂ ಶಾಕ್ ಆಗಿತ್ತು. ಎಲ್ಲ ಆಟಗಾರರು 6 ಪಾಸ್‌ಗಳನ್ನು ಪಡೆಯಲು ಅವಕಾಶವಿದೆ. ಆದರೆ, ಕೇವಲ ಮೂರು ಪಾಸ್‌ಗಳನ್ನು ನೀಡಲಾಗಿದೆ ಎಂದು ಸೆಹ್ವಾಗ್ ಹೇಳಿದ್ದರು. ಮೊದಲ ಬಾರಿ ಸಭೆಯು 20 ನಿಮಿಷಗಳ ಕಾಲ ನಡೆದಿತ್ತು. ಆಟಗಾರರಿಗೆ ಪಾಸ್‌ಗಳನ್ನು ನೀಡದೇ ಇದ್ದರೆ ಪಂದ್ಯವನ್ನು ಆಡುವುದಿಲ್ಲವೆಂದು ವೀರೂ ಬೆದರಿಕೆ ಹಾಕಿದ್ದರು’’ ಎಂದು ಅಶ್ವಿನ್ ಹಳೆಯ ಘಟನೆ ನೆನಪಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000ಕ್ಕೂ ಅಧಿಕ ರನ್ ಗಳಿಸಿದ್ದ ಸೆಹ್ವಾಗ್ ತಂಡದ ಸಭೆಯಲ್ಲಿ ರಣತಂತ್ರದ ಬಗ್ಗೆ ಚರ್ಚಿಸಲು ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಅವರು ಚೆಂಡನ್ನು ಬಾರಿಸುವತ್ತ ಮಾತ್ರ ಗಮನ ನೀಡುತ್ತಿದ್ದರು ಎಂದು ಅಶ್ವಿನ್ ಹೇಳಿದರು.







