ಭಾರತ ವಿರುದ್ಧ ಪಾಕ್ ಸೋತಿದ್ದನ್ನು ನೋಡಿ ನೋವಾಗಿದೆ: ಇಮ್ರಾನ್ ಖಾನ್

ಲಂಡನ್, ಜೂ.5: ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಸರ್ಫ್‌ರಾಝ್ ಅಹ್ಮದ್ ನೇತೃತ್ವದ ಪಾಕ್ ತಂಡ ಹೀನಾಯವಾಗಿ ಸೋತಿರುವುದು ನನ್ನ ತೀರಾ ನೋವುಂಟು ಮಾಡಿದೆ ಎಂದು ಪಾಕ್‌ನ ಕ್ರಿಕೆಟ್ ದಂತಕತೆ ಇಮ್ರಾನ್ ಖಾನ್ ಹೇಳಿದ್ದಾರೆ.
ಇದೀಗ ರಾಜಕಾರಣಿಯಾಗಿರುವ ಇಮ್ರಾನ್ ಸತತ ಟ್ವೀಟ್ ಮೂಲಕ ಪಾಕಿಸ್ತಾನ ಕ್ರಿಕೆಟ್ ವ್ಯವಸ್ಥೆಯನ್ನು ದೂಷಿಸಿದ್ದಾರೆ.
‘‘ಓರ್ವ ಕ್ರೀಡಾಪಟುವಾಗಿ ಗೆಲುವು ಹಾಗೂ ಸೋಲು ಪಂದ್ಯದ ಒಂದು ಭಾಗವೆಂದು ನನಗೆ ಗೊತ್ತಿದೆ. ಆದರೆ, ಪಾಕ್ ತಂಡ ಸ್ವಲ್ಪವೂ ಹೋರಾಟವನ್ನು ನೀಡದೇ ಭಾರತಕ್ಕೆ ಶರಣಾಗಿದ್ದನ್ನು ನೋಡಿ ತುಂಬಾ ಬೇಸರವಾಗಿದೆ. ಪ್ರತಿಭಾವಂತ ಆಟಗಾರರನ್ನು ಹೇರಳವಾಗಿ ಹೊಂದಿರುವ ಪಾಕ್ ಕ್ರಿಕೆಟ್‌ನ ಸ್ವರೂಪ ಸಂಪೂರ್ಣ ಬದಲಾಗದೇ ಇದ್ದರೆ ಪಾಕ್-ಭಾರತ ನಡುವಿನ ಅಂತರ ಇನ್ನಷ್ಟು ಹೆಚ್ಚಾಗುತ್ತದೆ’’ ಎಂದು ಇಮ್ರಾನ್ ಹೇಳಿದ್ದಾರೆ.
ಭಾರತ ವಿರುದ್ಧದ ಮಳೆಬಾಧಿತ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ 41 ಓವರ್‌ಗಳಲ್ಲಿ 289 ರನ್ ಪರಿಷ್ಕೃತ ಗುರಿ ಪಡೆದಿದ್ದ ಪಾಕ್ ತಂಡ 33.4 ಓವರ್‌ಗಳಲ್ಲಿ 164 ರನ್‌ಗೆ ಆಲೌಟಾಗಿ 124 ರನ್‌ಗಳಿಂದ ಸೋಲುಂಡಿತ್ತು. ಅಝರ್ ಅಲಿ(50) ಹೊರತುಪಡಿಸಿ ಉಳಿದವರೆಲ್ಲರೂ ಸಂಪೂರ್ಣ ವಿಫಲರಾದರು.
ಮಳೆಬಾಧಿತ ಪಂದ್ಯದಲ್ಲಿ 48 ಓವರ್‌ಗೆ ಕಡಿತಗೊಂಡಿದ್ದ ಪಂದ್ಯದಲ್ಲಿ ಭಾರತ ಅಗ್ರ ಕ್ರಮಾಂಕದ ದಾಂಡಿಗರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್‌ಗಳ ನಷ್ಟಕ್ಕೆ 319 ರನ್ ಗಳಿಸಿತ್ತು.







