ಮ್ಯಾಡ್ರಿಡ್‌ನಲ್ಲಿ ರಿಯಲ್ ತಂಡದ ವಿಜಯೋತ್ಸವ

ಮ್ಯಾಡ್ರಿಡ್, ಜೂ.5: ದಾಖಲೆ 12ನೆ ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನು ಜಯಿಸಿರುವ ರಿಯಲ್ ಮ್ಯಾಡ್ರಿಡ್ ತಂಡ ರವಿವಾರ ತವರು ಪಟ್ಟಣದಲ್ಲಿ ಟ್ರೋಫಿಯೊಂದಿಗೆ ಪರೇಡ್ ನಡೆಸಿತ್ತು. ಸ್ಪೇನ್‌ನ ರಾಜಧಾನಿಯ ರಸ್ತೆ ಇಕ್ಕೆಲದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಅಭಿಮಾನಿಗಳು ಕ್ರಿಸ್ಟಿಯಾನೊ ರೊನಾಲ್ಡೊರನ್ನು ನೋಡಲು ಮುಗಿಬಿದ್ದರು.
ರೊನಾಲ್ಡೊ ಹೊಸ ಕೇಶವಿನ್ಯಾಸದಲ್ಲಿ ತಂಡದ ವಿಜಯೋತ್ಸವದಲ್ಲಿ ಭಾಗವಹಿಸಿದ್ದು, ಅವರೊಂದಿಗೆ ನಾಯಕ ಸರ್ಜಿಯೊ ರಾಮೊಸ್ ಸಾಂಪ್ರದಾಯಿಕ ವಿಜಯೋತ್ಸವದ ನೇತೃತ್ವವಹಿಸಿದರು. ಸ್ಥಳೀಯ ಸರಕಾರಿ ಗಣ್ಯರುಗಳು ಆಟಗಾರರನ್ನು ಸ್ವಾಗತಿಸಿದ್ದು, ಆ ನಂತರ ತೆರೆದ ಬಸ್‌ನಲ್ಲಿ ಟ್ರೋಫಿೊಂದಿಗೆ ಸಿಟಿ ಸೆಂಟರ್‌ನತ್ತ ಮೆರವಣಿಗೆ ನಡೆಸಲಾಯಿತು.
ಸಿಟಿ ಸೆಂಟರ್‌ನಲ್ಲಿ ಮುಂದುವರಿಯಲಿರುವ ವಿಜಯೋತ್ಸವ ಕಾರ್ಯಕ್ರಮದಲ್ಲಿ 81,000 ಫುಟ್ಬಾಲ್ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಲಂಡನ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ಇತ್ತೀಚೆಗೆ ಉಗ್ರರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.
ಶನಿವಾರ ನಡೆದಿದ್ದ ಚಾಂಪಿಯನ್ಸ್ ಲೀಗ್ ಟ್ರೋಫಿ ಫೈನಲ್‌ನಲ್ಲಿ ರೊನಾಲ್ಡೊ ಬಾರಿಸಿದ್ದ ಅವಳಿ ಗೋಲುಗಳ ನೆರವಿನಿಂದ ಮ್ಯಾಡ್ರಿಡ್ ತಂಡ ಇಟಾಲಿಯನ್ ಕ್ಲಬ್ ಜುವೆಂಟಸ್‌ನ್ನು 4-1 ಅಂತರದಿಂದ ಮಣಿಸಿತ್ತು. ಸ್ಪೇನ್‌ನ ದೈತ್ಯ ತಂಡ ಮ್ಯಾಡ್ರಿಡ್ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ತಂಡ ಎನಿಸಿಕೊಂಡಿತು.
ಮ್ಯಾಡ್ರಿಡ್ ಕ್ಲಬ್ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್ ಕೋಚ್ ಝೈನುದ್ದೀನ್ ಝೈದಾನ್‌ರನ್ನು ವಿಶೇಷವಾಗಿ ಶ್ಲಾಘಿಸಿದರು. ಫ್ರೆಂಚ್‌ನ ಝೈದಾನ್ 2001 ಹಾಗೂ 2006ರ ನಡುವೆ ರಿಯಲ್ ತಂಡದ ಪ್ರಮುಖ ಆಟಗಾರನಾಗಿದ್ದರು. ಕೇವಲ 18 ತಿಂಗಳ ಹಿಂದೆ ಮ್ಯಾಡ್ರಿಡ್ ಕೋಚ್ ಆಗಿ ನೇಮಕಗೊಂಡ ಬಳಿಕ ಅಪೂರ್ವ ಯಶಸ್ಸು ಸಾಧಿಸಿದ್ದಾರೆ.
ಎರಡು ವಾರಗಳ ಹಿಂದೆ ಲಾ ಲಿಗ ಟೂರ್ನಿಯ ಫೈನಲ್‌ನಲ್ಲಿ ಬಾರ್ಸಿಲೋನವನ್ನು ಮಣಿಸಿದ್ದ ಮ್ಯಾಡ್ರಿಡ್ ತಂಡ 59 ವರ್ಷಗಳ ಬಳಿಕ ಸತತ ಚಾಂಪಿಯನ್ಸ್ ಲೀಗ್‌ಗಳನ್ನು ಜಯಿಸಿದ ಸಾಧನೆ ಮಾಡಿದೆ.







