ಆಸ್ಟ್ರೇಲಿಯದ ಆಟಕ್ಕೆ ಮಳೆಯ ಅಡ್ಡಿ

ಕಿಂಗ್‌ಸ್ಟನ್ ಓವಲ್, ಜೂ.5: ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಇಂದು ಗೆಲುವಿಗೆ 183 ರನ್‌ಗಳ ಸವಾಲನ್ನು ಪಡೆದಿರುವ ಆಸ್ಟ್ರೇಲಿಯ ತಂಡದ ಆಟಕ್ಕೆ ಮಳೆ ಅಡ್ಡಿಪಡಿಸಿದೆ.
ಆಸ್ಟ್ರೇಲಿಯ ಇನಿಂಗ್ಸ್ ಆರಂಭಿಸಿ 16 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 83 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿದೆ.
ಆ್ಯರೊನ್ ಫಿಂಚ್ 19 ರನ್ ಗಳಿಸಿ ಔಟಾಗಿದ್ಧಾರೆ. ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 40ರನ್ ಮತ್ತು ನಾಯಕ ಸ್ಟೀವನ್ ಸ್ಮಿತ್ 22 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಸ್ಟಾರ್ಕ್ ದಾಳಿಗೆ ಸಿಲುಕಿದ ಬಾಂಗ್ಲಾ :ಮಿಚೆಲ್ ಸ್ಟಾರ್ಕ್ ನೇತೃತ್ವದಲ್ಲಿ ಆಸ್ಟ್ರೇಲಿಯದ ಸಂಘಟಿತ ದಾಳಿಗೆ ಸಿಲುಕಿದ ಬಾಂಗ್ಲಾದೇಶ ಕಡಿಮೆ ಮೊತ್ತಕ್ಕೆ ಆಲೌಟಾಗಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡ 44.3 ಓವರ್‌ಗಳಲ್ಲಿ 182 ರನ್‌ಗಳಿಗೆ ಆಲೌಟಾಗಿದೆ.
ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ದಾಖಲಿಸಿದ 95 ರನ್‌ಗಳ ಸಹಾಯದಿಂದ ಬಾಂಗ್ಲಾಕ್ಕೆ ಮೂರಂಕೆಯ ಸ್ಕೋರ್ ದಾಖಲಿಸಲು ಸಾಧ್ಯವಾಗಿತ್ತು.
ತಮೀಮ್ ಇಕ್ಬಾಲ್ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲೂ ಅದೇ ಹಾದಿಯಲ್ಲಿ ಹೆಜ್ಜೆ ಇರಿಸಿದ್ದರು.ಆದರೆ ಸ್ಟಾರ್ಕ್ ಶತಕ ಗಳಿಸಲು ತಮೀಮ್‌ಗೆ ಅವಕಾಶ ನೀಡಲಿಲ್ಲ.
ತಮೀಮ್ ಇಕ್ಬಾಲ್ 114 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 95 ರನ್ ಗಳಿಸಿ ಔಟಾದರು. ಅವರು 171ನೆ ಏಕದಿನ ಪಂದ್ಯದಲ್ಲಿ 10ನೆ ಶತಕ ವಂಚಿತಗೊಂಡರು. ಇವರನ್ನು ಹೊರತುಪಡಿಸಿ ಶಾಕಿಬ್ ಅಲ್ ಹಸನ್ (29) ಮತ್ತು ಮೆಹಾದಿ ಹಸನ್ ಮಿರಾಝ್ (14) ಎರಡಂಕೆಯ ಸ್ಕೋರ್ ದಾಖಲಿಸಿದರು.
ಆಸ್ಟ್ರೇಲಿಯದ ಬೌಲರ್‌ಗಳಾದ ಸ್ಟಾರ್ಕ್ 29ಕ್ಕೆ 4 ಮತ್ತು ಝಾಂಪಾ 13ಕ್ಕೆ 2 ವಿಕೆಟ್, ಹೇಝಲ್‌ವುಡ್, ಕಮಿನ್ಸ್, ಟ್ರಾವಿಸ್ ಹೆಡ್ ಮತ್ತು ಹೆನ್ರಿಕ್ಸ್ ತಲಾ 1ವಿಕೆಟ್ ಉಡಾಯಿಸಿ ಬಾಂಗ್ಲಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಸಂಕ್ಷಿಪ್ತ ಸ್ಕೋರ್ ವಿವರ
ಬಾಂಗ್ಲಾದೇಶ 44.3 ಓವರ್‌ಗಳಲ್ಲಿ ಆಲೌಟ್ 182( ತಮೀಮ್ ಇಕ್ಬಾಲ್ 95, ಶಾಕಿಬ್ ಅಲ್ ಹಸನ್ 29, ಮೆಹಾದಿ ಹಸನ್ ಮಿರಾಝ್ 14;ಸ್ಟಾರ್ಕ್ 29ಕ್ಕೆ 4 ,ಝಂಪಾ 13ಕ್ಕೆ 2 )
,,,,,,,,,,,







