2022ರ ವಿಶ್ವಕಪ್: ಕತರ್‌ನೊಂದಿಗೆ ಫಿಫಾ ನಿರಂತರ ಸಂಪರ್ಕ
ಝೂರಿಚ್,ಜೂ.5: ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಸೌದಿ ಅರೇಬಿಯ, ಈಜಿಪ್ಟ್, ಯುಎಇ ಹಾಗೂ ಇತರ ದೇಶಗಳು ಕತರ್‌ನೊಂದಿಗೆ ಸಂಬಂಧ ಕಡಿದುಕೊಂಡಿರುವ ಕುರಿತು ನೇರವಾಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ, 2022ರಲ್ಲಿ ಕತರ್‌ನಲ್ಲಿ ವಿಶ್ವಕಪ್ ಆಯೋಜನೆಯ ಜವಾಬ್ದಾರಿ ಹೊತ್ತಿರುವ ಸಂಘಟನಾ ಸಮಿತಿಯೊಂದಿಗೆ ‘ನಿರಂತರ ಸಂಪರ್ಕ’ದಲ್ಲಿರುವುದಾಗಿ ಹೇಳಿದೆ.
‘‘2022ರ ಫಿಫಾ ವಿಶ್ವಕಪ್‌ನ ಸ್ಥಳೀಯ ಆಯೋಜನಾ ಸಮಿತಿ ಹಾಗೂ ವಿಶ್ವಕಪ್‌ಗೆ ಸಂಬಂಧಿಸಿದ ವಿಷಯವನ್ನು ನಿಭಾಯಿಸುವ ಸುಪ್ರೀಂ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಇ-ಮೇಲ್ ಹೇಳಿಕೆಯೊಂದರಲ್ಲಿ ಫಿಫಾ ತಿಳಿಸಿದೆ.
ಕತರ್‌ನ ಸ್ಥಳೀಯ ವರ್ಲ್ಡ್ ಕಪ್ ಆಯೋಜನಾ ಸಮಿತಿ ಹಾಗೂ ಏಷ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ) ಕತರ್‌ನಲ್ಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತಿದ್ದು, ಈ ಎರಡು ಸಂಸ್ಥೆಗಳು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ.
ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸುತ್ತಿರುವ ಕತರ್ ರಾಷ್ಟ್ರೀಯ ಫುಟ್ಬಾಲ್ ತಂಡ ಏಳು ಪಂದ್ಯಗಳಲ್ಲಿ ನಾಲ್ಕು ಅಂಕವನ್ನು ಗಳಿಸಿದ್ದು, ದಕ್ಷಿಣ ಕೊರಿಯ, ಸಿರಿಯಾ ಹಾಗೂ ಚೀನಾ ತಂಡಗಳ ವಿರುದ್ಧ ಆಡಲು ಬಾಕಿಯಿದೆ.
ಕತರ್ ತಂಡ ತನ್ನ ಗುಂಪಿನಲ್ಲಿ 3ನೆ ಸ್ಥಾನ ಪಡೆದು ಇತರ ಏಷ್ಯಾ ತಂಡಗಳ ವಿರುದ್ಧ ಪ್ಲೇ-ಆಫ್ ಪಂದ್ಯವಾಡುವ ಸಾಧ್ಯತೆ ಕಡಿಮೆಯಿದೆ.







