ಮಧ್ಯಪ್ರದೇಶ ಸರ್ಕಾರ ವಿರುದ್ಧ ರೈತರು ಸಿಡಿದೆದ್ದದ್ದೇಕೆ?

ಭೋಪಾಲ್, ಜೂ.7: ಕಳೆದ ಹದಿನಾರು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಪೈಕಿ ಐದನೇ ಒಂದರಷ್ಟು ರೈತರು ಈ ವರ್ಷ ಆತ್ಮಹತ್ಯೆಗೆ ಶರಣಾಗಿದ್ದಾರೆ. 2014-15ರ ಬಳಿಕ ಕೃಷಿಕ್ಷೇತ್ರ ಶೇಕಡ 20ರ ಪ್ರಗತಿ ದಾಖಲಿಸಿದ್ದರೂ, ಈ ಬೆಳವಣಿಗೆ ಅಚ್ಚರಿ ಎನಿಸಿದೆ.
ಐದು ರಾಷ್ಟ್ರಮಟ್ಟದ ಕೃಷಿ ಕರ್ಮಣ ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡ ರಾಜ್ಯದ ಕೃಷಿ ಕ್ಷೇತ್ರದ ಯಶಸ್ಸಿನ ಬಗ್ಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬೆನ್ನು ತಟ್ಟಿಕೊಂಡಿದ್ದರು. ಅದರೆ ತಾವು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೇ, ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಕಂಗಾಲಾಗಿದ್ದ ರೈತರನ್ನು ನಿರ್ಲಕ್ಷಿಸಿದರು. ಪೊಲೀಸ್ ಗೋಲಿಬಾರ್‌ನಲ್ಲಿ ಐವರು ಮೃತಪಟ್ಟ ಮಂಡಸವೂರ್ ಸೇರಿದಂತೆ 15 ಜಿಲ್ಲೆಗಳನ್ನೊಳಗೊಂಡ ಮಾಳವ- ನಿಮದ್ ಪ್ರದೇಶದ ಪರಿಸ್ಥಿತಿ ಶೋಚನೀಯವಾಗಿದೆ. ಸತತ ಎರಡನೇ ವರ್ಷ ಈರುಳ್ಳಿ ಬಂಪರ್ ಇಳುವರಿ ನೀಡಿತ್ತು. ಆದರೆ ಖರೀದಿಸುವವರೇ ಇರಲಿಲ್ಲ. ಅಂತಿಮವಾಗಿ ಸರ್ಕಾರ ಕೆ.ಜಿ.ಗೆ 8 ರೂಪಾಯಿ ದರದಲ್ಲಿ ಖರೀದಿಸಲು ಮುಂದಾಯಿತು.
ರೈತರ ಸಿಟ್ಟಿಗೆ ಮುಖ್ಯ ಕಾರಣವೆಂದರೆ, ಸರ್ಕಾರ ಖರೀದಿಗೆ ವ್ಯವಸ್ಥೆಯನ್ನೂ ಮಾಡಲಿಲ್ಲ ಅಥವಾ ನ್ಯಾಯಯುತ ಬೆಲೆಯನ್ನೂ ನೀಡಲಿಲ್ಲ. ರೈತರು ತಾವು ಬೆಳೆದ ಈರುಳ್ಳಿಯನ್ನು ರಸ್ತೆಗೆ ಚೆಲ್ಲಿದರು. ಕಳೆದ ವರ್ಷ ಮಾಳವ ಪ್ರದೇಶದ ಕೆಲ ಮಾರುಕಟ್ಟೆಯಲ್ಲಿ 1 ರೂಪಾಯಿ ಅಥವಾ 2 ರೂಪಾಯಿ ದರದಲ್ಲಿ ಮಾರಾಟವಾದ ನಿದರ್ಶನವೂ ಇದೆ. ಈ ವರ್ಷ ಕೂಡಾ ಚಳಿಗಾಲದಲ್ಲಿ ಬೆಳೆದ ಟೊಮ್ಯಾಟೊ ಹಾಗೂ ಆಲೂಗಡ್ಡೆಯನ್ನು ತೀರಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬೇಕಾಗಿ ಬಂದಿದ್ದರಿಂದ ಭಾರಿ ನಷ್ಟ ಅನುಭವಿಸುವಂತಾಗಿತ್ತು.
ರೈತರ ಹತಾಶೆಗೆ ರಾಜ್ಯದ ಆತ್ಮಹತ್ಯೆ ಪ್ರಕರಣಗಳು ಕನ್ನಡಿ ಹಿಡಿಯುತ್ತವೆ. 2016ರ ಫೆಬ್ರವರಿಯಿಂದ 2017ರವರೆಗೆ ರಾಜ್ಯದಲ್ಲಿ 1982 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇಡೀ ರಾಜ್ಯದಲ್ಲಿ ಕಳೆದ 16 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯ ಐದನೇ ಒಂದರಷ್ಟು. ಬೆಳೆ ವೈಫಲ್ಯ, ಉತ್ಪನ್ನ ಮಾರಾಟಕ್ಕೆ ವಿಫಲವಾದದ್ದು, ಸಾಲ ಮರುಪಾವತಿಗೆ ಅಸಮರ್ಥರಾದದ್ದು, ರೈತರ ಆತ್ಮಹತ್ಯೆಗೆ ಮುಖ್ಯ ಕಾರಣ ಎಂದು ಎನ್‌ಸಿಆರ್ ದಾಖಲೆಗಳು ಹೇಳುತ್ತವೆ.







